ಮಂಗಳೂರು: ವ್ಯಕ್ತಿಯೋರ್ವರಿಗೆ 12 ಲಕ್ಷ ರೂ. ಸಾಲ ನೀಡುವುದಾಗಿ ಹೇಳಿ 1,25,400 ರೂ. ವಂಚನೆಗೈದಿರುವ ಬಗ್ಗೆ ಮಂಗಳೂರಿನ ವ್ಯಕ್ತಿಯೊಬ್ಬರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೋಸ ಹೋಗಿರುವ ವ್ಯಕ್ತಿಗೆ 2021 ಅಕ್ಟೋಬರ್ 19ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಮೊಬೈಲ್ ಕರೆ ಬಂದಿದ್ದು, ಅತ್ತ ಕಡೆಯಿಂದ ಆದಿತ್ಯ ಬಿರ್ಲಾ ಫೈನಾನ್ಸ್ ಕಂಪೆನಿ ಸಿಬ್ಬಂದಿ ಎಂಬುದಾಗಿ ವ್ಯಕ್ತಿ ತಿಳಿಸಿದ್ದಾನೆ. ಆತ ಮತ್ತೊಬ್ಬ ಅಪರಿಚಿತ ವ್ಯಕ್ತಿಗೆ ಕಾನ್ಫರೆನ್ಸ್ ಕಾಲ್ ಕನೆಕ್ಟ್ ಮಾಡಿದ್ದಾನೆ. ಆತ ಸಂತ್ರಸ್ತ ವ್ಯಕ್ತಿಯಲ್ಲಿ ಮಾತನಾಡಿ, 12 ಲಕ್ಷ ರೂ. ಸಾಲವನ್ನು ಕಂಪೆನಿಯಿಂದ ಕೊಡುವುದಾಗಿ ತಿಳಿಸಿದ್ದಾನೆ.
ಅದಕ್ಕೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ವಾಟ್ಸ್ಆ್ಯಪ್ ಮಾಡಬೇಕೆಂದು ತಿಳಿಸಿದ್ದಾನೆ. ಬಳಿಕ ಮತ್ತೊಬ್ಬ ಅಪರಿಚಿತ ಕರೆ ಮಾಡಿ ಭಾರತೀಯ ಅಕ್ಸ ಇನ್ಶೂರೆನ್ಸ್ ಪಾಲಿಸಿ ಬಾಂಡ್ ಅನ್ನು ಆದಿತ್ಯ ಬಿರ್ಲಾ ಫೈನಾನ್ಸ್ ಕಂಪೆನಿ ಸಿಬ್ಬಂದಿಯ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕೆಂದು ತಿಳಿಸಿದ್ದಾನೆ.
ಬಳಿಕ ಅ.23ರಂದು ಭಾರತೀಯ ಅಕ್ಸ ಇನ್ಶೂರೆನ್ಸ್ ಸಿಬ್ಬಂದಿ ಕರೆ ಮಾಡಿರುವಾತ ಅರ್ಧ ವರ್ಷದ ಪ್ರೀಮಿಯಂ 60,000 ರೂ. ಹಾಗೂ ಜಿಎಸ್ಟಿ 2,700 ರೂ. ಪಾವತಿಸುವಂತೆ ತಿಳಿಸಿ ಲಿಂಕ್ ಒಂದನ್ನು ಕಳುಹಿಸಿದ್ದಾನೆ. ಆ ಲಿಂಕ್ ಅನ್ನು ಒಪನ್ ಮಾಡಿ ತನ್ನ ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಂದ 22,700 ರೂ. ಹಾಗೂ ಐಡಿಎಫ್ ಸಿ ಕ್ರೆಡಿಟ್ ಕಾರ್ಡ್ ನಿಂದ 40,000 ರೂ. ಪಾವತಿ ಮಾಡಿದ್ದರು. ಅ.28ರಂದು ವ್ಯಕ್ತಿಯೋರ್ವ ಕರೆ ಮಾಡಿ ಒಂದು ವರ್ಷದ ಪ್ರೀಮಿಯಂ ಪಾವತಿಸಿದರೆ ಸಾಲ ನೀಡುವುದಾಗಿ ತಿಳಿಸಿದ್ದಾನೆ. ಅದಕ್ಕೆ ಮತ್ತೆ ಲಿಂಕ್ ಕಳಿಸಿದ್ದು, ಮತ್ತೆ 62,700 ರೂ. ಪಾವತಿ ಮಾಡಿದ್ದರು. ಹೀಗೆ ಹಂತ ಹಂತವಾಗಿ ಒಟ್ಟು 1,25,400 ರೂ. ಹಣ ಪಾವತಿ ಮಾಡಿದ್ದರೂ, ಸಾಲ ಕೊಡದೆ ಮೋಸ ಮಾಡಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಮೋಸ ಹೋಗಿರುವ ವ್ಯಕ್ತಿ ದೂರು ನೀಡಿದ್ದಾರೆ.
Kshetra Samachara
15/11/2021 10:47 pm