ಬಂಟ್ವಾಳ: ಬಂಟ್ವಾಳ ತಾಲೂಕಿನ ಬಾಲಕಿಯೊಬ್ಬಳಿಗೆ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರ ನಡೆಸಿದ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯೊಬ್ಬಳು ಪ್ರತ್ಯೇಕ ದೂರುಗಳನ್ನು ನ.4 ಮತ್ತು 5ರಂದು ನೀಡಿದ್ದು, ಮೊದಲ ದಿನ ನೀಡಿದ ದೂರಿನಲ್ಲಿ ಫರಂಗಿಪೇಟೆ ಎಂಬಲ್ಲಿ ಆಟೊ ಚಾಲಕನೊಬ್ಬ ಲೈಂಗಿಕ ಶೋಷಣೆ ನಡೆಸಿದ್ದಾಗಿ ತಿಳಿಸಿದ್ದಳು. ಅದರಂತೆ ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಆರೋಪಿ ರಿಜ್ವಾನ್ ಎಂಬಾತನನ್ನು ಬಂಧಿಸಿದ್ದರು.
ದೂರಿನ ಮೇರೆಗೆ ಪೋಕ್ಸೋ ಆಕ್ಟ್ ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ. ಅದೇ ಬಾಲಕಿ ಮರುದಿನ ತನ್ನ ತಾಯಿಯೊಂದಿಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಂಡವೊಂದನ್ನು ರಚಿಸಿ, ಕಾರ್ಯಾಚರಣೆ ನಡೆಸಿದ ಪೊಲೀಸರು ಅರ್ಕುಳದ ಮಹಮ್ಮದ್ ಖಾಸಿಂ, ಅಜ್ಮಲ್ ಹುಸೈನ್ ಎಂಬವರನ್ನು ಬಂಧಿಸಿದೆ.
ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನವಾನೆ ಭಗವಾನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಶಿವಕುಮಾರ್ ಗುಣಾರೆ ನಿರ್ಧೇಶನದಂತೆ ಬಂಟ್ವಾಳ ಉಪವಿಭಾಗಾಧಿಕಾರಿಯಾದ ಶಿವಾಂಶು ರಜಪೂತ್ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಟಿ.ಡಿ ನಾಗರಾಜ್, ಪಿ.ಎಸ್.ಐ ಭಾರತಿ, ತರಭೇತಿ ಪಿ.ಎಸ್.ಐ ರಾಮಕೃಷ್ಣ, ವೀಣಾ ರಾಮಚಂದ್ರ, ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿಯವರಾದ ಜನಾರ್ಧನ, ಸುರೇಶ್, ಪುನೀತ್, ಮನೋಜ್ ಕುಮಾರ್ ,ಲೋಲಾಕ್ಷಿ, ವಿಶಾಲಾಕ್ಷಿ ರವರುಗಳೊನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ಕ್ಷಿಪ್ರ ತನಿಖೆ ಮತ್ತು ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಪ್ರಶಂಸಿದ್ದಾರೆ.
Kshetra Samachara
06/11/2021 06:17 pm