ಉಪ್ಪಿನಂಗಡಿ: ಕರ್ತವ್ಯ ನಿರತ ಮೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮೆಸ್ಕಾಂ ಸಿಬ್ಬಂದಿಯನ್ನು ವಿತೇಶ್ ಮತ್ತು ಸತೀಶ ಎಂದು ಗುರುತಿಸಲಾಗಿದ್ದು, ಇಬ್ಬರನ್ನೂ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿಯ ಪೆರಾರಿ ನಿವಾಸಿ ಇಸುಬು ಎಂಬಾತ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆಡು ಸಾಕಣೆ ಹಾಗೂ ಮಾರಾಟದ ವ್ಯಾಪಾರ ಮಾಡುತ್ತಿರುವ ಆರೋಪಿಯ ಆಡುಗಳಿಂದಾಗಿ ಉಪ್ಪಿನಂಗಡಿ ಜನತೆಗೆ ಭಾರಿ ತೊಂದರೆಯಾಗುತ್ತಿತ್ತು. ಸುಮಾರು 40 ರಿಂದ 50 ಆಡುಗಳು ಉಪ್ಪಿನಂಗಡಿ ಮೆಸ್ಕಾಂ ಕಚೇರಿಯೊಳಗೆ ಬಂದು ಉಪಟಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಆಡುಗಳನ್ನು ಕಟ್ಟಿ ಹಾಕುವಂತೆ ಮನವಿ ಮಾಡಿದ್ದ ಮೆಸ್ಕಾಂ ಸಿಬ್ಬಂದಿ ವಿರುದ್ಧ ತಿರುಗಿ ಬಿದ್ದ ಆರೋಪಿಯು ಪವರ್ ಮನ್ ಗಳಾದ ವಿತೇಶ್ ಮತ್ತು ಸತೀಶ್ ಮೇಲೆ ದೊಣ್ಣೆ ಮೂಲಕ ಹಲ್ಲೆ ನಡೆಸಿದ್ದಾನೆ. ಆರೋಪಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
Kshetra Samachara
16/10/2021 11:01 am