ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಶಾಂತಿ ಪಲ್ಕೆಯ ಪೊಯಿಮಾನ್ ಬಳಿಯ ತಮ್ಮ ಮನೆಯಿಂದ ಸೆ.11ರಂದು ನಾಪತ್ತೆಯಾಗಿದ್ದ ವೃದ್ಧ ಕಿಟ್ಟಣ್ಣ ಆಚಾರ್ಯ (80) ಅವರ ಮೃತದೇಹ ಮನೆ ಸಮೀಪದ ಹರೀಶ್ ಪೂಜಾರಿ ಎಂಬವರ ಕೆಸರು ತುಂಬಿದ ಗದ್ದೆಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಮೃತವ್ಯಕ್ತಿ ಕಿಟ್ಟಣ್ಣ ಆಚಾರ್ಯ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಕಳೆದ ದಿನಗಳ ಹಿಂದೆ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೋಮವಾರ ಸಂಜೆ ವೇಳೆಗೆ ಮಾಲೀಕ ಹರೀಶ್ ಪೂಜಾರಿ ಎಂಬವರು ತಮ್ಮ ಗದ್ದೆಗೆ ಕೆಲಸಕ್ಕೆಂದು ಬಂದ ವೇಳೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಶವವನ್ನು ಪರೀಕ್ಷಿಸಿದಾಗ ಕಿಟ್ಟಣ್ಣ ಆಚಾರ್ಯ ಮೃತದೇಹ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಗದ್ದೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕೆಸರು ಗದ್ದೆಗೆ ಜಾರಿ ಬಿದ್ದು ಮೇಲೆ ಬರಲಾಗದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಗ ನವೀನ್ ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
20/09/2021 10:45 pm