ಬಂಟ್ವಾಳ: ಪಣೋಲಿಬೈಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಬಳಿ ಬೈಕಿನಲ್ಲಿ ಬಂದಿದ್ದ ಇಬ್ಬರು ಬಲವಂತವಾಗಿ ಕರಿಮಣಿಸರವನ್ನು ಕಿತ್ತು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಟ್ವಾಳ ಡಿವೈಎಸ್ಪಿ ತಂಡ ಮತ್ತು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಆರ್ಯಾಪು ಗ್ರಾಮದ ರೋಹಿತ್ (22) ಮತ್ತು ಲೋಹಿತ್ (20) ಆರೋಪಿಗಳು. ಆರೋಪಿಗಳ ವಶದಿಂದ ಅವರುಗಳು ಸುಲಿಗೆ ಮಾಡಿದ ಮಾಂಗಲ್ಯ ಸರವನ್ನು ಹಾಗೂ ಸುಲಿಗೆ ಮಾಡಲು ಉಪಯೋಗಿಸಿದ ಅಪಾಚಿ ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಮೌಲ್ಯ ರೂ 1.35 ಲಕ್ಷ ಆಗಿರುತ್ತದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.
ಸೆ.8ರಂದು ಮಧ್ಯಾಹ್ನ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಪಣೋಲಿಬೈಲು ಬಳಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆ ವತ್ಸಲಾ (53)ರವರ ಕುತ್ತಿಗೆಯಿಂದ ಬೈಕಿನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಕರಿಮಣಿ ಸರವನ್ನು ಬಲವಂತವಾಗಿ ಕಿತ್ತು ಸುಲಿಗೆ ಮಾಡಿದ್ದರು.
ಪ್ರಕರಣದ ಪತ್ತೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಷ್ ಭಗವಾನ್ ಸೋನಾವಣೆ ನಿರ್ದೇಶನದಂತೆ ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಶಿವಕುಮಾರ್ ಗುಣಾರೆ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೆಲೈಂಟೈನ್ ಡಿಸೋಜಾ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ , ಬಂಟ್ವಾಳ ನಗರ ಠಾಣಾ ಪಿ.ಎಸ್.ಐ ಅವಿನಾಶ್ ಗೌಡ, ಅಪರಾಧ ಪತ್ತೆ ವಿಭಾಗದ ಪಿ.ಎಸ್.ಐ ಕಲೈಮಾರ್, ಬಂಟ್ವಾಳ ಡಿ.ವೈ.ಎಸ್.ಪಿ ತಂಡದ ಉದಯ ರೈ, ಪ್ರವೀಣ್ ಎಂ, ಪ್ರಶಾಂತ್, ಇರ್ಷಾದ್, ಕುಮಾರ್ ಎಚ್.ಕೆ, ಹಾಗೂ ಬಂಟ್ವಾಳ ನಗರ ಠಾಣಾ ಸಿಬ್ಬಂದಿಗಳಾದ ಜಗನ್ನಾಥ ಶೆಟ್ಟಿ, ಕೃಷ್ಣ ಕುಲಾಲ್ ಮತ್ತು ಹೋಮ್ ಗಾರ್ಡ್ ಸಿಬ್ಬಂದಿ ಜಯಗಣೇಶ್ ಭಾಗವಹಿಸಿರುತ್ತಾರೆ. ಅತೀ ಶೀಫ್ರವಾಗಿ ಈ ಕ್ಲಿಷ್ಟಕರವಾದ ಪ್ರಕರಣವನ್ನು ಭೇದಿಸಿದ ತಂಡವನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.
Kshetra Samachara
18/09/2021 08:24 pm