ಮಂಗಳೂರು: ನಗರದ ಐಷಾರಾಮಿ ಮೊಬೈಲ್ ಶೋ ರೂಮೊಂದರಲ್ಲಿ ಕಳೆದ ಜುಲೈ ಸಂದರ್ಭದ ವಿಕೇಂಡ್ ಕರ್ಫ್ಯೂ ಸಮಯದಲ್ಲಿ ನಡೆದ ಕಳವು ಪ್ರಕರಣವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶ ಮೂಲದ ವಿನೋದ್ ಸಿಂಗ್ ಅಲಿಯಾಸ್ ವಿಜಯ್ ಶೆಟ್ಟಿ ಬಂಧಿತ ಆರೋಪಿ. ನಗರದ ಬಲ್ಮಠದಲ್ಲಿರುವ ಮೇಪಲ್-ಎಕ್ಸ್ ಮೊಬೈಲ್ ಶೋ ರೂಂಗೆ ಕನ್ನ ತೋಡಿರುವ ಖದೀಮರು ಅಂಗಡಿಯ ಹಿಂಬದಿ ಕಿಟಕಿಯ ಸರಳುಗಳನ್ನು ಮುರಿದು ಒಳ ನುಗ್ಗಿ 54 ಲಕ್ಷ ರೂ. ಮೌಲ್ಯದ ಒಟ್ಟು 68 ಆ್ಯಪಲ್ ಐಫೋನ್ ಕಂಪೆನಿಯ ಮೊಬೈಲ್ ಫೋನ್‌ಗಳನ್ನು ಕಳವುಗೈದಿದ್ದರು. ಅಲ್ಲದೆ 1.15 ಲಕ್ಷ ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಕೃತ್ಯದಲ್ಲಿ ಇಬ್ಬರು ಭಾಗಿಯಾಗಿರುವುದು ಮೆಲ್ನೋಟಕ್ಕೆ ತಿಳಿದು ಬಂದಿದ್ದು, ಸದ್ಯ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುಂಬೈನಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿರುವ ಇವರು ಕಳ್ಳತನ ನಡೆಸುವುದಕ್ಕೂ ಮೊದಲು ಮೊಬೈಲ್ ಶೋರೂಂ ಗೆ ಗ್ರಾಹಕರ ಸೋಗಿನಲ್ಲಿ ಬಂದು ಎಲ್ಲವನ್ನು ಪರಿಶೀಲನೆ ನಡೆಸಿ ಪ್ಲ್ಯಾನ್ ರೆಡಿ ಮಾಡಿದ್ದಾರೆ. ಆ ಬಳಿಕ ವೀಕೆಂಡ್ ಕರ್ಫ್ಯೂ ಸಂದರ್ಭ ಅಂಗಡಿಗೆ ನುಗ್ಗಿ ಬೆಲೆ ಬಾಳುವ ಮೊಬೈಲ್ ನಗದು ದೋಚಿದ್ದಾರೆ. ಶೋರೂಂ ಒಳಗಿರುವ ಸಿಸಿಟಿವಿ ಕ್ಯಾಮರ ಹಾರ್ಡ್ ಡಿಸ್ಕ್‌ನ್ನು ಸಹ ಕಳ್ಳರು ಕದ್ದೊಯ್ದಿದ್ದರು. ಕಳ್ಳತನ ಬಳಿಕ ಮಂಗಳೂರಿನಿಂದ ಉಡುಪಿಗೆ ಬಸ್ ನಲ್ಲಿ ತೆರಳಿ ಅಲ್ಲಿಂದ ಮತ್ತೆ ರೈಲಿನ ಮೂಲಕ ಮುಂಬೈಗೆ ವಾಪಸಾಗಿದ್ದರು. ಇನ್ನೊಬ್ಬ ಆರೋಪಿಯ ಬಂಧನವಾಗಬೇಕಿದ್ದು 27 ಮೊಬೈಲ್ ಫೋನ್‌ಗಳು ಇನ್ನಷ್ಟೇ ದೊರೆಯಬೇಕಾಗಿದೆ ಎಂದು ಹೇಳಿದರು.
Kshetra Samachara
14/08/2021 05:31 pm