ಮಂಗಳೂರು: ನಗರದ ಹೊರ ವಲಯದಲ್ಲಿರುವ ನೀರುಮಾರ್ಗ ಗ್ರಾಮದ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯಲ್ಲಿ ಕೆಲ ದಿನಗಳ ಹಿಂದೆ ನಡೆದ ಕಳವು ಕೃತ್ಯದ ಬಗ್ಗೆ ದೂರು ನೀಡಿದರೂ ಪೊಲೀಸರು ಈ ತನಕ ಆರೋಪಿಗಳನ್ನು ಪತ್ತೆ ಹಚ್ಚದಿರುವುದು ನಿರಾಶೆ ಮೂಡಿಸಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಶೀಘ್ರ ತನಿಖೆ ನಡೆಸಬೇಕೆಂದು ಶ್ರೀರಾಮ ಸೇನೆ ಮಂಗಳವಾರ ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜು.20ರಂದು ರಾತ್ರಿ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯಲ್ಲಿ ಕಳ್ಳತನ ನಡೆದಿದ್ದು, ಅಲ್ಲದೆ ಭಜನಾ ಮಂಡಳಿಯ ಗರ್ಭಗುಡಿಯೊಳಗೆ ಪಾದರಕ್ಷೆ ಧರಿಸಿ ಅಪವಿತ್ರಗೊಳಿಸಿದ್ದಾರೆ. ಇದರಿಂದ ಶ್ರದ್ಧಾ ಭಕ್ತಿಯ ಮನಸ್ಸುಗಳಿಗೆ ಬಹಳ ನೋವು ತಂದಿದೆ. ಸಿಸಿ ಟಿ.ವಿ. ದಾಖಲೆಗಳಿದ್ದರೂ, ಇನ್ನೂ ಪ್ರಕರಣವನ್ನು ಭೇದಿಸಲಾಗಿಲ್ಲ. ಆದ್ದರಿಂದ ಊರಿನ ಜನರು ಬೃಹತ್ ಪ್ರತಿಭಟನೆಗೆ ಸಿದ್ಧರಾಗಿ ಹಲವು ಸಂಘ ಸಂಸ್ಥೆಗಳನ್ನು ಸಂಪರ್ಕಿಸುತ್ತಿದ್ದು, ಕೂಡಲೇ ಹೆಚ್ಚಿನ ಮುತುವರ್ಜಿ ವಹಿಸಿ ಶೀಘ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
Kshetra Samachara
10/08/2021 10:21 pm