ಮಂಗಳೂರು: ನಗರದ ಕಾಟಿಪಳ್ಳದಲ್ಲಿ ರೌಡಿಶೀಟರ್ ಪಿಂಕಿ ನವಾಝ್ ಎಂಬಾತನ ಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಹಾಗೂ ಸಿಸಿಬಿ ಪೊಲೀಸರು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರ ನಿವಾಸಿಗಳಾದ ಪ್ರಕಾಶ್ ಭಂಡಾರಿ (29), ಶಾಕೀಬ್ (29) ಶೈಲೇಶ್ ಪೂಜಾರಿ (19), ಹನೀಫ್ (20), ಸುವಿನ್ ಕಾಂಚನ್ (23), ಲಕ್ಷ್ಮೀಶ್ (26), ಅಹ್ಮದ್ ಸಾದಿಕ್ (23), ನಿಸಾರ್ ಹುಸೈನ್(29), ರಂಜನ್ ಶೆಟ್ಟಿ (24) ಬಂಧಿತರು.
ಪ್ರಕರಣದ ವಿವರ: ರೌಡಿ ಶೀಟರ್ ಪಿಂಕಿ ನವಾಝ್ ಫೆ.10ರಂದು ಸಂಜೆ ಕಾಟಿಪಳ್ಳದ 2ನೇ ಬ್ಲಾಕ್‌ನಲ್ಲಿರುವ ಟಿಕ್‌ಟಾಕ್ ಗಾರ್ಡನ್ ಬಳಿ ಇದ್ದಾಗ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆತನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಸುರತ್ಕಲ್ ಪೊಲೀಸರು ಕೊಲೆ ಯತ್ನ ನಡೆಸಿದ ಆರೋಪದಲ್ಲಿ ನಾಲ್ವರು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಐವರನ್ನು ಬಂಧಿಸಿದ್ದಾರೆ. ಈ ಸಂದರ್ಭ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಸ್ವಿಫ್ಟ್ ಕಾರು, ಮಾರಕಾಸ್ತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಳೆ ದ್ವೇಷದಿಂದಲೇ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
19/02/2021 05:25 pm