ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೊಟೇಲ್ ಸಿಬ್ಬಂದಿಗೆ ಚೂರಿ ಇರಿದು, ಫೈರಿಂಗ್ ಪ್ರಕರಣ; ಇಬ್ಬರ ಸೆರೆ

ಮಂಗಳೂರು: ನಗರದ ಫಳ್ನೀರ್ ಬಳಿ ಎಂಎಫ್ ಸಿ ಕಟ್ಟಾಮಿಟ್ಟಾ ಹೊಟೇಲ್ ನಲ್ಲಿ ದಾಂಧಲೆ ನಡೆಸಿ, ಸಿಬ್ಬಂದಿಗೆ ಚೂರಿಯಿಂದ ಇರಿದು, ಫೈರಿಂಗ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಉಳ್ಳಾಲ, ಅಬ್ಬಕ್ಕ ಸರ್ಕಲ್ ಬಳಿಯ ನಿವಾಸಿ ಮಹಮ್ಮದ್ ಸಮೀರ್ ಅಲಿಯಾಸ್ ಸಮೀರ್ ಕಡಪರ(29), ಉಳ್ಳಾಲ ದರ್ಗಾ ಬಳಿಯ ಮೇಲಂಗಡಿ ನಿವಾಸಿ ಮಹಮ್ಮದ್ ಅರ್ಫಾನ್ ಅಲಿಯಾಸ್ ಅರ್ಫಾನ್(23) ಬಂಧಿತರು.

ಪ್ರಕರಣದ ಹಿನ್ನೆಲೆ: ನಗರದ ಫಳ್ನೀರ್ ಬಳಿ ಎಂಎಫ್ ಸಿ ಕಟ್ಟಾಮಿಟ್ಟಾ ಹೊಟೇಲ್ ಗೆ 2020 ರ ಅ.10ರಂದು ಸಂಜೆ 5 ಗಂಟೆ ಸುಮಾರಿಗೆ ಆಗಮಿಸಿದ ಮಹಮ್ಮದ್ ಸಮೀರ್, ಮಹಮ್ಮದ್ ಅರ್ಫಾನ್, ಇಝಾಝ್ ಮಹಮ್ಮದ್, ಜುಬೈದ್ ಬಶೀರ್ ಹಾಗೂ ಅಬೂಬಕ್ಕರ್ ಸಿದ್ದೀಕ್ ಚಹಾ ಸೇವನೆಗೆ ಬಂದಿದ್ದರು‌. ಈ ಸಂದರ್ಭ ತಾವು‌ ತೆಗೆದುಕೊಂಡಿರುವ ಸಮೋಸಾ ಬಿಸಿಯಿಲ್ಲ ಎಂಬ ನೆಪವೊಡ್ಡಿ ಹೊಟೇಲ್ ಸೊತ್ತುಗಳನ್ನು ಹಾಳುಗೆಡವಿ, ಸಿಬ್ಬಂದಿಯನ್ನು ಚೂರಿಯಿಂದ ತಿವಿದು ಕೊಲೆಗೆ ಯತ್ನಿಸಿ ಓಡಿ ಹೋಗಿದ್ದರು.

ಈ ಸಂದರ್ಭ ಹೊಟೇಲ್ ಸಿಬ್ಬಂದಿ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಇಂದಿರಾ ಆಸ್ಪತ್ರೆಯ ಬಳಿ ಮಹಮ್ಮದ್ ಸಮೀರ್ ರಿವಾಲ್ವರ್ ನಿಂದ ಫೈರ್ ಮಾಡಿ ಕೊಲೆ ಮಾಡಲು ಯತ್ನಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಇಝಾಝ್ ಮಹಮ್ಮದ್, ಜುಬೈದ್ ಬಶೀರ್ ಹಾಗೂ ಹಣದ ನೆರವು ನೀಡಿ, ಆಶ್ರಯ ನೀಡಿರುವ ಹನೀಫ್ ಪಚ್ಚಂಬಳ, ಮಹಮ್ಮದ್ ಸತ್ತಾರ್, ಮಹಮ್ಮದ್ ಅಶ್ರಫ್, ಎಸ್.ಮಹಮ್ಮದ್ ಸಾದಿಕ್, ಮಹಮ್ಮದ್ ‌ಶಾರೂಕ್, ಅಬೂಬಕ್ಕರ್ ಸಿದ್ದಿಕ್ ಹಾಗೂ ಮಹಮ್ಮದ್ ಅಸ್ಗರ್ ಎಂಬವರನ್ನು ಈಗಾಗಲೇ ಬಂಧಿಸಲಾಗಿತ್ತು.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಉಳ್ಳಾಲದ ಕಡಪರ ನದಿ ಕಿನಾರೆ ಬಳಿ ಪ್ರಕರಣದ ಪ್ರಮುಖ ಆರೋಪಿಗಳಾದ ಮಹಮ್ಮದ್ ಸಮೀರ್ ಹಾಗೂ ಮಹಮ್ಮದ್ ಅರ್ಫಾನ್ ನ್ನು ಬಂಧಿಸಲಾಗಿದೆ. ಈ ಸಂದರ್ಭ ಆರೋಪಿಗಳು ಕೃತ್ಯಕ್ಕೆ ಬಳಸಿದ ರಿವಾಲ್ವರ್ ಹಾಗೂ ಚೂರಿಯನ್ನು ಪೊಲೀಸರು ವಶಪಡಿಸಿದ್ದಾರೆ.

ಆರೋಪಿಗಳು ಮೂರು ತಿಂಗಳಿನಿಂದ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದು, ಇವರಿಗೆ ಹಣಕಾಸು ನೆರವು, ಆಶ್ರಯ ಹಾಗೂ ವಾಹನ ನೆರವು ನೀಡಿರುವ ಆರೋಪಿಗಳ ಮೇಲೂ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

19/02/2021 05:17 pm

Cinque Terre

16.05 K

Cinque Terre

1

ಸಂಬಂಧಿತ ಸುದ್ದಿ