ಮಂಗಳೂರು: ದೇರಳಕಟ್ಟೆಯ ಕಣಚೂರು ಎಜುಕೇಷನ್ ಇನ್ಸ್ ಟಿಟ್ಯೂಟ್ನ ಬಿಪಿಟಿ( ಬ್ಯಾಚ್ಲರ್ ಆಫ್ ಫಿಸಿಯೋಥೆರಪಿ) ಪ್ರಥಮ ವರ್ಷದ 5 ವಿದ್ಯಾರ್ಥಿಗಳಿಗೆ ಅದೇ ಕಾಲೇಜಿನ ಹಿರಿಯ 18 ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ ಕೊಲೆ ಬೆದರಿಕೆ ಒಡ್ಡಿದುದರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಫೆ. 4 ರಂದು ಕಾಲೇಜಿನ ಕ್ಯಾಂಪಸ್ ನಲ್ಲಿ ಘಟನೆ ನಡೆದಿದ್ದು 8 ನೇ ತಾರೀಖಿನಂದು ಉಳ್ಳಾಲ ಠಾಣೆಗೆ ದೂರನ್ನು ನೀಡಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಪಿಟಿ ಪ್ರಥಮ( 2020-21) ವರ್ಷದ ವಿದ್ಯಾರ್ಥಿಗಳಾದ ಅಮಲ್ ಮಹಮ್ಮದ್, ಆಸಿಮ್ ಜಾಸಿಮ್ ಕೆ.ಎಮ್ , ಮಹಮ್ಮದ್ ಜೀಹಾವ್ ಆಕಿಬ್ ಜಿಹಾದ್ , ಅಹಮ್ಮದ್ ಶಿಬಿಲಿ , ಶಿನಾಸ್ ಮೊಯಿದುನ್ನಿ ಎಂಬ ಐವರನ್ನು ಅದೇ ಕಾಲೇಜಿನ ಹಿರಿಯ 2019-20 ಸಾಲಿನ ವಿದ್ಯಾರ್ಥಿಗಳಾದ ಮಹಮ್ಮದ್ ಶಮ್ಮಾಸ್, ಅಕ್ಷಯ್ ಕೆ.ಎಸ್ , ರಾಬಿನ್ ಬಿಜು , ಅಬ್ದುಲ್ ಇನಾಸ್ ಮಹಮ್ಮದ್ , ಜಿಪ್ರಿನ್ ರೊಚಾ , ಆಲ್ವಿನ್ ಜಾಯ್ , ಸಾಧನ್ ನವಿಲ್ , ಮಹಮ್ಮದ್ ಸೂರಜ್ , ಅಮೀನ್ ಶಮ್ಮಾಸ್ , ಅಬ್ದುಲ್ ವಕೀಬ್ , ಶಾಹೀನ್ ಅಬ್ದುಲ್ಲಾ , ಜೆರೊನ್ ಶೆರಿಲ್ , ಬಾಸಿಲ್ ಸಿ.ಪಿ , ಅಶ್ವಿನ್ ಬಾಬು , ಜೌಹಾರ್ ಮೊಯ್ದಿನ್ , ಜಾಬಿನ್ ಮೆಹರೂಪ್ , ಅಹಮ್ಮದ್ ಫಯಾಝ್ , ಅಬ್ದುಲ್ ಬಾಸಿತ್ ಎಂಬ ಹದಿನೆಂಟು ಮಂದಿ ಕ್ಯಾಂಪಸ್ ನಲ್ಲಿ ತಾವು ಕಲಿಯುತ್ತಿರುವ ತರಗತಿ ಕೋಣೆಯೊಳಗೆ ಒತ್ತಾಯಪೂರ್ವಕವಾಗಿ ಕರೆಸಿಕೊಂಡು ಕಿರಿಯ ವಿದ್ಯಾರ್ಥಿಗಳು ತಮ್ಮೆದುರು ತಲೆ ತಗ್ಗಿಸಿ ನಿಲ್ಲಬೇಕು, ಮೀಸೆ ಬೋಳಿಸಬೇಕು ಎಂದು ಆವಾಝ್ ಹಾಕಿದ್ದು ಕಿರಿಯ ಐದು ವಿದ್ಯಾರ್ಥಿಗಳನ್ನು ತಳ್ಳಾಟ ,ನೂಕಾಟ ನಡೆಸಿದ್ದಾರೆ.ಆಡಳಿತ ಮಂಡಳಿಗೆ ದೂರು ನೀಡಿದ್ದಲ್ಲಿ ಕೊಲೆ ನಡೆಸುವುದಾಗಿಯೂ ಬೆದರಿಕೆ ಒಡ್ಡಿದ್ದಾರೆನ್ನಲಾಗಿದೆ.
ಈ ಬಗ್ಗೆ ನೊಂದ ಕಿರಿಯ ಐದು ವಿದ್ಯಾರ್ಥಿಗಳು ಬಿಪಿಟಿ ಕ್ಯಾಂಪಸ್ ಮುಖ್ಯಸ್ಥರಾದ ಮಾರ್ಟಿನ್ ಜಾರ್ಜ್ ಅವರಿಗೆ ದೂರನ್ನು ನೀಡಿದ್ದಾರೆ.ಕಣಚೂರು ಆಡಳಿತ ಮಂಡಳಿಯು ಕಳೆದ ಫೆ.8 ರ ಸೋಮವಾರದಂದು ಉಳ್ಳಾಲ ಠಾಣೆಗೆ ದೂರನ್ನು ನೀಡಿದ್ದು 18 ಆರೋಪಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
Kshetra Samachara
11/02/2021 05:15 pm