ಮಂಗಳೂರು: ಗ್ರಾಹಕರೊಬ್ಬರ ಆರ್ಡರ್ ಕ್ಯಾನ್ಸಲ್ ಆಗಿದ್ದನ್ನೇ ಪ್ರಶ್ನಿಸಿ ರೆಸ್ಟೋರೆಂಟ್ ಮಾಲೀಕ ಹಾಗೂ ಆತನ ಪುತ್ರ ಸೇರಿಕೊಂಡು ನೌಕರನಿಗೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದಿದೆ.
ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಟ್ವಾಳ ಮೂಲದ ಯುವಕ ಪ್ರಶಾಂತ್ ಭಂಡಾರಿ, ನಗರದ ಯೆಯ್ಯಾಡಿಯಲ್ಲಿರುವ ಮಧುವನ್ ರೆಸ್ಟೋರೆಂಟ್ ನಲ್ಲಿ ಕಳೆದ ನಾಲ್ಕು ವರುಷಗಳಿಂದ ದುಡಿಯುತ್ತಿದ್ದಾರೆ.
ಜನವರಿ 27 ರಂದು ಗ್ರಾಹಕರೊಬ್ಬರು 230 ರೂಪಾಯಿಯ ಫಿಶ್ ಫ್ರೈ ಆರ್ಡರ್ ಮಾಡಿದ್ದರು. ಆದರೆ, ಗ್ರಾಹಕರು ಆರ್ಡರ್ ಮಾಡಿದ್ದ ಆ ಮೀನು ಫ್ರೈ ಇಲ್ಲದಿರುವುದರಿಂದ ಪಾರ್ಸೆಲ್ ಕೌಂಟರ್ ನಲ್ಲಿದ್ದ ಪ್ರಶಾಂತ್ ಕೊನೆಕ್ಷಣದಲ್ಲಿ ಆರ್ಡರ್ ರದ್ದು ಮಾಡಿದ್ದರು. ಇದನ್ನು ಪ್ರಶ್ನಿಸಿ ರೆಸ್ಟೋರೆಂಟ್ ಮಾಲೀಕರು, ಪ್ರಶಾಂತ್ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ. ಕ್ಯಾನ್ಸಲ್ ಆದ ಆರ್ಡರ್ ಹಣವನ್ನು ನೀನೇ ಕದ್ದಿದ್ದೀಯಾ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾಗಿ ಪ್ರಶಾಂತ್ ಆರೋಪಿಸಿದ್ದಾರೆ.
ಮಧುವನ್ ರೆಸ್ಟೋರೆಂಟ್ ಮಾಲೀಕ ಜೋಸೆಫ್ ಡಿಸೋಜ ಹಾಗೂ ಅವರ ಪುತ್ರ ಡೇನ್ ಡಿಸೋಜ ತಮ್ಮ ಕ್ಯಾಬಿನ್ ಗೆ ಕರೆದೊಯ್ದು ಕಬ್ಬಿಣದ ರಾಡ್, ಕೈ ಹಾಗೂ ಶೂಗಳಿಂದ ಹಲ್ಲೆ ನಡೆಸಿದ್ದಾಗಿ ಪ್ರಶಾಂತ್ ಆರೋಪಿಸಿದ್ದಾರೆ. ಇದರಿಂದಾಗಿ ತಲೆ, ಬೆನ್ನು ಹಾಗೂ ಕುತ್ತಿಗೆ ಬಳಿ ವಿಪರೀತ ನೋವು ಇರುವುದಾಗಿ ಪ್ರಶಾಂತ್ ತಿಳಿಸಿದ್ದಾರೆ. ಹಲ್ಲೆ ನಡೆಸಿದ ರೆಸ್ಟೋರೆಂಟ್ ಮಾಲೀಕ ಜೋಸೆಫ್ ಡಿಸೋಜ ಹಾಗೂ ಅವರ ಪುತ್ರ ಡೇನ್ ಡಿಸೋಜ ಮೇಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Kshetra Samachara
01/02/2021 02:15 pm