ಮಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿರುವ ವ್ಯಕ್ತಿಯ ಮೇಲಿನ ಆರೋಪ ಎರಡನೇ ಸಿಜೆಎಂಸಿ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ ಆರು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ಮಹಮ್ಮದ್ ನಿಝಾರ್ ಕೆ. ಶಿಕ್ಷೆಗೊಳಗಾದ ಅಪರಾಧಿ. ಈತ ಕದ್ರಿ ಕಂಬಳ ರಸ್ತೆ ನಿವಾಸಿ ಅನುರಾಧ ಎಸ್. ರಾವ್(66) ಅವರು 2016ರ ಅಕ್ಟೋಬರ್ 16ರಂದು ಬೆಳಗ್ಗೆ 6.30ಕ್ಕೆ ಕಾಸ್ಮೊಸ್ ಲೇನ್ ಕ್ರಾಸ್ ಬಳಿ ವಾಕಿಂಗ್ ಹೋಗುತ್ತಿರುವ ವೇಳೆ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾನೆ. ಬಳಿಕ ಅಲ್ಲಿಂದ ನಿಂತಿದ್ದ ಸ್ಕೂಟರ್ ನಲ್ಲಿ ಮತ್ತೊಬ್ಬನೊಂದಿಗೆ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆಯ ಅಂದಿನ ನಿರೀಕ್ಷಕ ಮಾರುತಿ ಜಿ. ನಾಯಕ್ ಆರೋಪಿಯನ್ನು ಬಂಧಿಸಿದ್ದಾರೆ.
ಅಲ್ಲದೆ ಸುಲಿಗೆ ಮಾಡಿರುವ ಸರವನ್ನು ಬೆಳ್ಳಾರೆಯ ಕಾಮಧೇನು ಜ್ಯುವೆಲರ್ಸ್ ನಿಂದ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಆರೋಪಿ ನಿಝಾರ್ ಕೆ., ಮತ್ತೋರ್ವ ಆರೋಪಿ ಜುರೈಸ್ ಕೆ.ಎಂ. ಹಾಗೂ ಜ್ಯುವೆಲ್ಲರಿ ಮಾಲಕಿಯ ಮೇಲೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ವಾದ - ವಿವಾದವನ್ನು ಆಲಿಸಿದ 2ನೇ ಸಿಜಿಎಂಸಿ ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಆರೋಪಿ ಆರೋಪಿ ನಿಝಾರ್ ಕೆ. ತಪ್ಪಿತಸ್ಥನೆಂದು ಘೋಷಿಸಿದ್ದಾರೆ. ಆದರೆ ಮತ್ತೋರ್ವ ಆರೋಪಿ ಜುರೈಸ್ ಹಾಗೂ ಜುವೆಲ್ಲರಿ ಮಾಲಕಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆಗೊಳಿಸಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದಾರೆ.
Kshetra Samachara
20/09/2022 09:51 pm