ಮಂಗಳೂರು: ನಗರದ ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 6ನೇ ಬ್ಲಾಕ್‌ನಲ್ಲಿ ಮದರಸಾದಿಂದ ಮನೆಗೆ ಬರುತ್ತಿದ್ದ ಬಾಲಕ ಶಯಾನ್ ಮೇಲಿನ ದುಷ್ಕರ್ಮಿಗಳಿಂದ ನಡೆದಿರುವ ಹಲ್ಲೆಯನ್ನು ಖಂಡಿಸಿ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನಿ ಮ್ಯಾನೇಜ್ ಮೆಂಟ್ ಅಸೋಸಿಯೇಶನ್‌ನ ಪದಾಧಿಕಾರಿಗಳ ತಂಡ ಬಾಲಕನ ಮನೆಗೆ ಭೇಟಿ ನೀಡಿದರು.
ಈ ಸಂದರ್ಭ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ, ಸುನ್ನಿ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ, ಕೆ.ಕೆ.ಎಂ.ಕಾಮಿಲ್ ಸಖಾಫಿ, ಎಸ್.ಎಂ.ಎ. ಜಿಲ್ಲಾಧ್ಯಕ್ಷ ಎ.ಪಿ.ಇಸ್ಮಾಯಿಲ್ ಅಡ್ಯಾರ್ ಪದವು, ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಕೊಳಕೆ, ಜಿಲ್ಲಾ ಉಪಾಧ್ಯಕ್ಷ ಮೂಸಾ ಹಾಜಿ ಮುಡಿಪು, ಇಕ್ಬಾಲ್ ಕೃಷ್ಣಾಪುರ, ಇಸ್ಮಾಯೀಲ್ ಕಿನ್ಯ, ಅಬ್ದುಲ್ ಲತೀಫ್ ಸುಬ್ಬಗುಳಿ, ಶಾಫಿ ಮದನಿ ಕುಪ್ಪೆಪದವು ಮತ್ತಿತರರು ಉಪಸ್ಥಿತರಿದ್ದರು.
ಪ್ರಕರಣದ ಹಿನ್ನೆಲೆ: ಬಾಲಕ ಶಯಾನ್ ಮದರಸಾ ಬಿಟ್ಟು ಚಕ್ರವರ್ತಿ ಮೈದಾನವಾಗಿ ಮನೆಗೆ ಬರುತ್ತಿದ್ದ. ಈ ವೇಳೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ಆರನೇ ಬ್ಲಾಕ್ ನಲ್ಲಿ ಬರುತ್ತಿದ್ದ ವೇಳೆ ಹಿಂಬಯಿಂದ ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳಿಬ್ಬರು ಬೈಕ್ ನಲ್ಲಿಯೇ ಬಾಲಕನ್ನು ಎಳೆದಾಡಿ ಹಲ್ಲೆಗೈದಿದ್ದಾರೆ. ಈ ವೇಳೆ ಬಾಲಕ ಧರಿಸಿರುವ ಮದರಸಾದ ಸಮವಸ್ತ್ರ ಹರಿದಿದ್ದು, ಆತ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಹಲ್ಲೆಗೈದವರ ಕೈಯಲ್ಲಿ ನೂಲು ಇದ್ದು ನಾಮ ಹಾಕಿದ್ದರು ಅಲ್ಲದೆ ಮಾಸ್ಕ ಧರಿಸಿದ್ದರು ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಶಯಾನ್ ಹೇಳಿದ್ದಾನೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
28/06/2022 11:31 pm