ಮಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಾಕ್ಟೀಸ್ ಮಾಡುತ್ತಿದ್ದ ಸಂದರ್ಭ ಕೈ ತಾಗಿದ್ದನ್ನೇ ನೆಪ ಮಾಡಿ ಜೂನಿಯರ್ಸ್ ಗಳಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಸೀನಿಯರ್ಸ್ ವಿದ್ಯಾರ್ಥಿಗಳ ತಂಡದ 8 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಂಗಳೂರಿನ ಉಳ್ಳಾಲ ನಿವಾಸಿ ಮಹಮ್ಮದ್ ಅಫ್ರೀಶ್(21), ಪಾಂಡೇಶ್ವರ ನಿವಾಸಿ ಸುನೈಫ್(21), ಕೋಟೆಕಾರು ನಿವಾಸಿಗಳಾದ ಮಹಮ್ಮದ್ ಅಶಾಮ್(21), ಇಬ್ರಾಹಿಂ ರಾಜಿ(20), ಬಂದರ್ ನಿವಾಸಿ ಮಹಮ್ಮದ್ ಅಫಾಮ್ ಅಸ್ಲಾಂ(21), ಅಡ್ಡೂರು ಗುರುಪುರ ನಿವಾಸಿಗಳಾದ ಮಹಮ್ಮದ್ ಸಿನಾನ್ ಅಬ್ದುಲ್ಲಾ(21), ಮಹಮ್ಮದ್ ಸೈಯದ್ ಅಫ್ರೀದ್(21), ಕೇರಳ ರಾಜ್ಯದ ಕಾಸರಗೋಡು ನಿವಾಸಿ ಶೇಖ್ ಮೊಹಿಯುದ್ದೀನ್(20) ಬಂಧಿತ ವಿದ್ಯಾರ್ಥಿಗಳು.
ಇವರೆಲ್ಲರೂ ನಗರದ ಬಲ್ಮಠದಲ್ಲಿರುವ ಪ್ರತಿಷ್ಠಿತ ಯೆನೆಪೊಯ ಕಾಲೇಜಿನ ಪದವಿ ವಿದ್ಯಾರ್ಥಿಗಳು. ಮೇ 28ರಂದು ದೇರಳಕಟ್ಟೆಯ ಯೆನೆಪೊಯ ಕಾಲೇಜಿನ ಕಲ್ಚರಲ್ ಫೆಸ್ಟ್ ನಲ್ಲಿ ಜೂನಿಯರ್ಸ್, ಸೀನಿಯರ್ಸ್ ವಿದ್ಯಾರ್ಥಿಗಳು ಪ್ರಾಕ್ಟೀಸ್ ಮಾಡುತ್ತಿದ್ದರು. ಈ ಸಂದರ್ಭ ಕೈ ತಾಗಿದೆ ಎಂದು ಸೀನಿಯರ್ಸ್ ವಿದ್ಯಾರ್ಥಿಗಳು ತಗಾದೆ ತೆಗೆದು ಜಗಳವಾಡಿಕೊಂಡಿದ್ದಾರೆ. ರಾತ್ರಿ 8.30 ಸುಮಾರಿಗೆ ಮತ್ತೆ ಜೂನಿಯರ್ಸ್ ವಿದ್ಯಾರ್ಥಿಗಳು ವಾಸವಿರುವ ಚಿಲಿಂಬಿ ಹಿಲ್ಸ್ ಕ್ರೈಸ್ಟ್ ಫ್ಲ್ಯಾಟ್ ಗೆ 12 ಮಂದಿ ಸೀನಿಯರ್ಸ್ ವಿದ್ಯಾರ್ಥಿಗಳು ಅಕ್ರಮ ಪ್ರವೇಶ ಮಾಡಿದ್ದಾರೆ. ಇವರು ಮಾರಕಾಯುಧ ಹಿಡಿದುಕೊಂಡು ಬಂದು ಅಫ್ರೀಝ್ ಎಂಬ ವಿದ್ಯಾರ್ಥಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ರಿಕೆಟ್ ವಿಕೇಟ್ ನಿಂದ ಹೊಡೆಯಲು ಯತ್ನಿಸಿ ಕೊಲೆಗೆ ಪ್ರಯತ್ನಿಸಿದ್ದರು.
ಈ ಬಗ್ಗೆ ಉರ್ವ ಪೊಲೀಸ್ ಠಾಣೆ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಉರ್ವ ಠಾಣೆಯ ಪೊಲೀಸರು 8ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ನಾಲ್ವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Kshetra Samachara
30/05/2022 05:14 pm