ಕಾರ್ಕಳ: ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ ಮತ್ತು ನಕ್ಸಲ್ ಸದಸ್ಯೆ ಸಾವಿತ್ರಿ ಅವರನ್ನು ಕಾರ್ಕಳ, ಹೆಬ್ರಿ, ಅಜೆಕಾರು ಠಾಣೆಗಳ ವ್ಯಾಪ್ತಿಯ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸ್ ಹಾಗೂ ನ್ಯಾಯಾಂಗ ತನಿಖೆಗಾಗಿ ಚಿಕ್ಕಮಗಳೂರಿನಿಂದ ಕಾರ್ಕಳಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕರೆತರಲಾಗಿದೆ.
20 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇವರಿಬ್ಬರನ್ನು 12ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಕ್ಸಲರನ್ನು ಇರಿಸುವ ಠಾಣೆಗಳಲ್ಲಿ 120ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ದೂರು ನೀಡಲು ಬರುವ ಸಾರ್ವ ಜನಿಕರಿಗೆ ಭದ್ರತೆ ದೃಷ್ಟಿಯಿಂದ ಹೊರಗೆ ಪ್ರತ್ಯೇಕ ದೂರು ಸ್ವೀಕಾರ ಕೌಂಟರನ್ನು ತೆರೆಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಐಜಿ ಮೇಲುಸ್ತುವಾರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಿಂದೆ ನಕ್ಸಲ್ ಕೃತ್ಯಗಳು ನಡೆದಿರುವ ಹೆಬ್ರಿ, ಈದು, ಅಜೆಕಾರಿನ ಸ್ಥಳಗಳಿಗೆ ಡಿ ಕರೆದೊಯ್ಯುವ ಸಾಧ್ಯತೆಗಳಿವೆ.
PublicNext
04/05/2022 03:27 pm