ಮಂಗಳೂರು: ಪೊಲೀಸ್ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ, ಇಲಾಖೆಯ ಮೇಲಾಧಿಕಾರಿಗಳಿಂದ ಅನುಮತಿ ಪಡೆಯದೆ ವಿದೇಶಕ್ಕೆ ಪ್ರವಾಸ ಮಾಡಿರುವ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸೇವೆಯಿಂದ ಅಮಾನತು ಮಾಡಿದ್ದಾರೆ.
ಸಂಚಾರ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹಮ್ಮದ್ ಶರೀಫ್ ಊರಿನಲ್ಲಿರುವ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮಾರ್ಚ್ 16-20ರವರೆಗೆ ರಜೆ ಪಡೆದಿದ್ದರು. ಆದರೆ ಈ ರಜೆಯ ಅವಧಿಯಲ್ಲಿ ಅವರು ಇಲಾಖೆಯ ಅನುಮತಿ ಪಡೆಯದೆ ದುಬೈಗೆ ಪ್ರವಾಸ ಕೈಗೊಂಡಿರುವುದು ತಿಳಿದು ಬಂದಿದೆ. ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮ 2021ರ ನಿಯಮ 8ರ ಉಪನಿಯಮ 2ಕ್ಕೆ ಸಂಬಂಧಿಸಿದಂತೆ ಇಲಾಖೆಯ ಮೇಲಾಧಿಕಾರಿಗಳ ಪೂರ್ವಾನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡುವಂತಿಲ್ಲ. ಆದ್ದರಿಂದ ಕೆ.ಎಸ್.ಪಿ.ಡಿ.ಪಿ. ನಿಯಮಗಳು 1965/89ರ ನಿಯಮ 5ರ ಅನುಸಾರ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
PublicNext
23/03/2022 12:06 pm