ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಮಂಡಲ ಅಧ್ಯಕ್ಷ ಸೇರಿ 15 ಜನರಿಗೆ ಜೈಲು ಶಿಕ್ಷೆ

ಸುಖ್ಯ : ಸುಳ್ಯದ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದ ಶ್ರೀಮತಿ ಸರಸ್ವತಿ ಕಾಮತ್ ಅವರ ಮೇಲೆ 2014 ಚುನಾವಣಾ ಸಂದರ್ಭದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ 15 ಮಂದಿಗೆ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆಯ ತೀರ್ಪು ನೀಡಿದೆ.

2014 ರ ಚುನಾವಣೆ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಮರ್ಕಂಜದ ಕುದ್ಕುಳಿ ಎಂಬಲ್ಲಿ,ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿಯ ತಂಡವೊಂದು ಮದುವೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ ಕಾಲಿನಿಂದ ತನ್ನ ಮರ್ಮಾಂಗಕ್ಕೆ ತುಳಿದು, ಸೀರೆಯನ್ನು ಎಳೆದಿದ್ದಾರೆಂದೂ, ಆ ವೇಳೆ ತನ್ನ ರಕ್ಷಣೆಗೆ ಬಂದ ಇಬ್ಬರ ಮೇಲೆಯೂ ಇವರು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರೆಂದೂ ಸರಸ್ವತಿ ಕಾಮತ್ ಅವರು ಪೋಲೀಸರಿಗೆ ದೂರು ನೀಡಿದ್ದರು.

ಈ ದೂರಿನ ತನಿಖೆ ನಡೆಸಿದ ಆಗಿನ ಸುಳ್ಯ ಠಾಣಾಧಿಕಾರಿ ರವಿ ಬಿ.ಎಸ್. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಳ್ಯ ಹಿರಿಯ ನ್ಯಾಯಾಲಯವು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆಯೆಂದು ಸೆಪ್ಟೆಂಬರ್ 6 ರಂದು ಸಂಜೆ ತೀರ್ಪು ನೀಡಿ, ಎಲ್ಲಾ ಹದಿನೈದು ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡನೆಯ ಘೋಷಣೆ ಮಾಡಿದೆ.

ಭಾರತೀಯ ದಂಡ ಸಂಹಿತೆ 143 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಜೈಲು, ಸೆಕ್ಷನ್ 147 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಜೈಲು ಮತ್ತು 3 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 1ತಿಂಗಳ ಸೆರೆವಾಸ, ಸೆಕ್ಷನ್ 341 ರ ಅಪರಾಧಕ್ಕೆ ಹದಿನೈದು ದಿನಗಳ ಜೈಲು ಮತ್ತು 500 ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವಾರ ಹೆಚ್ಚುವರಿ ಜೈಲು, ಸೆಕ್ಷನ್ 504 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಹೆಚ್ಚುವರಿ ಜೈಲು, ಸೆಕ್ಷನ್ 506 ಜತೆಗೆ 149 ರ ಅಪರಾಧಕ್ಕೆ 1 ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಹೆಚ್ಚುವರಿ ಜೈಲುವಾಸ, ಸೆಕ್ಷನ್ 354 ಜೊತೆಗೆ 149 ರ ಅಪರಾಧಕ್ಕೆ 2 ವರ್ಷ ಜೈಲು ಮತ್ತು 1 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದಲ್ಲದೆ ಎಲ್ಲಾ ಹದಿನೈದು ಮಂದಿ ಆರೋಪಿಗಳು ತಲಾ ರೂ. 3750 ರಂತೆ 50 ಸಾವಿರ ರೂ. ಪರಿಹಾರವನ್ನು ನೊಂದ ಮಹಿಳೆಗೆ ನೀಡಬೇಕೆಂದೂ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಒಟ್ಟು 15 ಸಾಕ್ಷಿಗಳ ಪೈಕಿ 13 ಮಂದಿಯೂ ಪ್ರಾಸಿಕ್ಯೂಶನ್ ಪರವಾಗಿ ಸಾಕ್ಷಿ ನುಡಿದಿದ್ದಾರೆಂದು ತಿಳಿದು ಬಂದಿದೆ. ಆರೋಪಿಗಳ ಪರ ನ್ಯಾಯವಾದಿಯವರು ಆರೋಪಿಗಳಿಗೆ ಉಚ್ಚ ನ್ಯಾಯಾಲಯದ ಮೊರೆ ಹೋಗಲು ಒಂದು ತಿಂಗಳ ಕಾಲಾವಕಾಶ ಕೊಟ್ಟು,ಜಾಮೀನು ಮಂಜೂರು ಮಾಡುವಂತೆ ನ್ಯಾಯಾಲಯದಲ್ಲಿ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಒಂದು ತಿಂಗಳ ಕಾಲಾವಕಾಶ ಮತ್ತು ಜಾಮೀನು ಮಂಜೂರು ಮಾಡಿದ್ದಾರೆಂದು ತಿಳಿದುಬಂದಿದೆ.

Edited By : Nirmala Aralikatti
Kshetra Samachara

Kshetra Samachara

07/09/2021 03:47 pm

Cinque Terre

14.04 K

Cinque Terre

1

ಸಂಬಂಧಿತ ಸುದ್ದಿ