ಮಂಗಳೂರು: ನಗರದ ಡಾ.ಪಿ.ದಯಾನಂದ ಪೈ- ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಂಟಾಗಿರುವ ಹಿಜಾಬ್ ವಿವಾದ ಪ್ರಕರಣದಲ್ಲಿ ಪರ - ವಿರೋಧ ದೂರು ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.
ನಿನ್ನೆ (ಗುರುವಾರ)ದಿಂದ ಕಾಲೇಜಿನಲ್ಲಿ ಸೃಷ್ಟಿಯಾಗಿರುವ ಹಿಜಾಬ್ ಗೊಂದಲವು ಇಂದೂ ಮುಂದುವರಿದೆ. ಇಂದು ಐವರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಲಾಗಿದೆ ಎಂದು ವಿದ್ಯಾರ್ಥಿನಿಯೋರ್ವಳು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ದೂರಿನಲ್ಲಿ ಆಕೆ ತಲೆಗೆ ಶಾಲು ಧರಿಸಿ ಪರೀಕ್ಷೆ ಬರೆಯಬಹುದೆಂದು ಪ್ರಾಂಶುಪಾಲರು ಅನುಮತಿ ನೀಡಿದ್ದರು. ಆದರೆ ವಿದ್ಯಾರ್ಥಿಯೋರ್ವ ಇನ್ನಿತರ ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಬಂದು ತಮಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿದ್ದಾನೆಂದು ದೂರಿನಲ್ಲಿ ಆಕೆ ತಿಳಿಸಿದ್ದಳು. ಆದರೆ ಪ್ರಾಂಶುಪಾಲರು ಪರೀಕ್ಷೆ ಬರೆಯಲು ತಾವು ಅನುಮತಿ ನೀಡಿಲ್ಲ ಎಂದಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅದೇ ರೀತಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿರುವ ವಿದ್ಯಾರ್ಥಿಯ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಆಕ್ಷೇಪಾರ್ಹ ರೀತಿಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಎರಡೂ ದೂರುಗಳ ಬಗ್ಗೆ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
Kshetra Samachara
04/03/2022 11:11 pm