ಹಿರಿಯಡ್ಕ: ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿರುವ ವಿಚಾರಕ್ಕೆ ಸಂಬಂಧಿಸಿ ಹಿಂದೂ ಪರ ಸಂಘಟನೆಗಳು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ ಘಟನೆ ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ನಡೆದಿದೆ.
ಘಟನೆ ನಡೆದು ಮೂರು ದಿನ ಕಳೆದರೂ ಬಾಲಕಿ ಪತ್ತೆಯಾಗದೆ ಇರುವುದನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೀದಿಗಿಳಿದಿವೆ. ಹಿರಿಯಡ್ಕ ಪೊಲೀಸ್ ಠಾಣೆಯ ಮುಂಭಾಗ ಮುನ್ನೂರಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದರು. ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದಾನೆ. ಇದೊಂದು ಲವ್ ಜಿಹಾದ್ ಎಂದು ಸಂಘಟನೆಯ ಪ್ರಮುಖರು ಆಪಾದಿಸಿದ್ದಾರೆ. ಈ ಘಟನೆಗೆ ಕುಮ್ಮಕ್ಕು ನೀಡಿ ದ ಎಲ್ಲರನ್ನೂ ತಕ್ಷಣ ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಉಪ ಪೊಲೀಸ್ ಅಧೀಕ್ಷಕ ಜೈಶಂಕರ್ ಮಾತನಾಡಿ, ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಸಿಸಿ ಟಿ.ವಿ. ಫುಟೇಜ್ ಈಗಾಗಲೇ ಲಭ್ಯವಾಗಿದ್ದು, ಆರೋಪಿಯ ಚಲನವಲನ ಬಗ್ಗೆ ನಿಗಾ ಇರಿಸಲಾಗಿದೆ. ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು. ತನಿಖೆಯ ಬಗ್ಗೆ ಈಗಾಗಲೇ ಏನು ಹೇಳಲಿಕ್ಕೆ ಆಗುವುದಿಲ್ಲ, ಇದರಿಂದ ವೃಥಾ ಆರೋಪಗಳಿಗೆ ಅನುಕೂಲವಾಗಬಹುದು. ಆರೋಪಿಯನ್ನು ತಕ್ಷಣ ಬಂಧಿಸುವ ವಿಶ್ವಾಸ ನಮಗಿದೆ. ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಆರೋಪಿ ಬಂಧನ ಶೀಘ್ರ ಆಗದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಈ ಸಂದರ್ಭ ಪ್ರತಿಭಟನಾಕಾರರು ನೀಡಿದರು.
Kshetra Samachara
31/10/2020 02:13 pm