ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಕಲಿ ಅಂಕಪ್ರತಿ ಮೂಲಕ ದುಬೈಯಲ್ಲಿ ನೌಕರಿ ಪಡೆದಾತ ಜೈಲುಪಾಲು

ಮಂಗಳೂರು: ಪಾಸ್​​ಪೋರ್ಟ್​ ಪಡೆಯಲು ನಕಲಿ ಎಸ್​ಎಸ್​​ಎಲ್​ಸಿ ಅಂಕಪ್ರತಿ ನಕಲಿ ಮಾಡಿರುವ ಆರೋಪಿಗೆ ಮಂಗಳೂರಿನ 2ನೇ ಸಿಜೆಎಂ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಬೆಳ್ತಂಗಡಿ ತಾಲೂಕಿನ ಕತ್ತರಿಗುಡ್ಡೆಯ ನಿವಾಸಿ ಮೊಹಮ್ಮದ್ ಶರೀಫ್ (31) ಶಿಕ್ಷೆಗೊಳಗಾದ ಆರೋಪಿ. ಮೊಹಮ್ಮದ್ ಶರೀಫ್ ವಿಸಿಟಿಂಗ್ ವೀಸಾದಲ್ಲಿ ದುಬೈಗೆ ತೆರಳಿ ನೌಕರಿ ಮಾಡುತ್ತಿದ್ದ. ಆದರೆ ಖಾಯಂ ಆಗಿ ವಿದೇಶದಲ್ಲಿ ನೌಕರಿ ಮಾಡಲು ವೀಸಾ ಬೇಕಿತ್ತು. ಇದಕ್ಕೆ ಎಸ್​ಎಸ್​​ಎಲ್​ಸಿ ಅಂಕಪ್ರತಿಯ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯು ಸೆಂಥಿಲ್ ಎಂಬಾತನ ಮೂಲಕ ಎಸ್​ಎಸ್​​ಎಲ್​ಸಿ ಅಂಕಪಟ್ಟಿ ನಕಲಿ ಮಾಡಿಸಿ, ತನ್ನ ಖಾಯಂ ವಿಳಾಸಕ್ಕೆ ಜೋಡಣೆ ಮಾಡಿಕೊಂಡು 6 ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ.

ಬಳಿಕ‌ ಭಾರತಕ್ಕೆ ಬಂದು ಪಾಸ್​​ಪೋರ್ಟ್ ಅನ್ನು ನವೀಕರಿಸಲು ಹೋದ ಸಂದರ್ಭ ಮಂಗಳೂರು ಪಾಸ್ ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಗಳಿಗೆ ಸಂಶಯ ಬಂದು ವಿಚಾರಣೆ ನಡೆಸಿದಾಗ ನಕಲಿ ಎಸ್​ಎಸ್​​ಎಲ್​ಸಿ ಅಂಕಪಟ್ಟಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಎರಡನೇ ಸಿಜೆಎಂ ನ್ಯಾಯಾಲಯ ವಾದ ವಿವಾದ ಆಲಿಸಿ ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಲಯ ದೃಢಪಡಿಸಿತ್ತು.

ಈ ಹಿನ್ನೆಲೆಯಲ್ಲಿ 2ನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಆರೋಪಿಗೆ ಐಪಿಸಿ ಸೆಕ್ಷನ್ 420 ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ, 10 ಸಾವಿರ ದಂಡ, ದಂಡ‌ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಜೆ, ಐಪಿಸಿ ಸೆಕ್ಷನ್ 468 ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ನಕಲಿ ಅಂಕಪಟ್ಟಿ ತಯಾರಿಸಿದ ಸೆಂಥಿಲ್ ಪತ್ತೆಯಾಗದ ಕಾರಣ ಆತನ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿರಲಿಲ್ಲ. ಸರ್ಕಾರದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

19/02/2022 10:23 am

Cinque Terre

15.54 K

Cinque Terre

0

ಸಂಬಂಧಿತ ಸುದ್ದಿ