ಮುಲ್ಕಿ: ಮುಲ್ಕಿ ಸಮೀಪದ ಬಲೆಪು ಬಳಿ ಸೋಮವಾರ ರಾತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಮಹಿಳೆ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಗೆ ಸಾಗಿಸುವಾಗ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ಸುಜಾತಾ ಎಸ್.ಸುವರ್ಣ (55) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಸುಜಾತ ಹಾಗೂ ಅವರ ಪತಿ ಶಂಕರ ಪೂಜಾರಿ ಮತ್ತು ಇಬ್ಬರು ಮಕ್ಕಳ ಸಮೇತ ಸೋಮವಾರ ರಾತ್ರಿ ಟಿವಿ ನೋಡುತ್ತಿದ್ದ ವೇಳೆ ಏಕಾಏಕಿ ಸುಜಾತ ಸುವರ್ಣ ಅಡುಗೆ ಕೋಣೆಗೆ ತೆರಳಿ ಒಲೆಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಏನಾಗುತ್ತದೆ ಎನ್ನುವಷ್ಟರಲ್ಲಿ ಅಡುಗೆ ಕೋಣೆಯಿಂದ ಶಬ್ದ ಹಾಗೂ ಬೊಬ್ಬೆಯನ್ನು ಕೇಳಿ ಪತಿ ಹಾಗೂ ಮಕ್ಕಳು ಧಾವಿಸಿದಾಗ ಮಹಿಳೆಯ ಮುಖ, ಎದೆ ಅರೆಬೆಂದು ಹೋಗಿ ನರಳಾಡುತ್ತಿದ್ದು ಕೂಡಲೇ ಮನೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಬಳಿಕ ರಾತ್ರಿ ಹೊತ್ತು ಮಹಿಳೆ ಎಲ್ಲರ ಜೊತೆ ಮಾತನಾಡಿದ್ದು, ರಾತ್ರಿ ಕೂಡ ಒಟ್ಟಿಗೆ ಮಲಗಿದ್ದಾರೆ.
ಬೆಳಿಗ್ಗೆ ಎದ್ದು ಚಹಾ ಕುಡಿದು ಆಸ್ಪತ್ರೆಗೆ ವಾಹನದಲ್ಲಿ ತೆರಳುತ್ತಿರುವಾಗ ಅಸ್ವಸ್ಥರಾಗಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಆದರೂ ಮಹಿಳೆಯನ್ನು ಬಳಿಕ ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಿದಾಗ ಮಹಿಳೆ ಸಾವನ್ನಪ್ಪಿರುವುದು ಖಚಿತಪಡಿಸಿದ್ದಾರೆ. ಏಕಾಏಕಿ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಲ್ಕಿ ಕ್ರೈಂ ಎಸ್ ಐ ದೇಜಪ್ಪ, ಎಎಸ್ಐ ಚಂದ್ರಶೇಖರ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
ಏಕಾಏಕಿ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಹಿಳೆ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದು ಮನೆಯಲ್ಲಿ ನಡೆಯುತ್ತಿರುವ ಪ್ರತಿ ವಿಷಯದಲ್ಲೂ ಟೆನ್ಶನ್ ಮಾಡಿಕೊಳ್ಳುತ್ತಿದ್ದರು ಎಂದು ಪತಿ ತಿಳಿಸಿದ್ದಾರೆ. ಪತಿ ಶಂಕರ ಪೂಜಾರಿ ನಿವೃತ್ತ ಬ್ಯಾಂಕ್ ಉದ್ಯೋಗಿ ಆಗಿದ್ದು, ಇಬ್ಬರು ಪುತ್ರಿಯರಿದ್ದಾರೆ.
Kshetra Samachara
06/10/2020 03:38 pm