ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು
ಮಂಗಳೂರು: 'ಗಿರಿಗಿಟ್' ಸಿನಿಮಾ ಮೂಲಕ ಕರಾವಳಿ ಮಾತ್ರವಲ್ಲದೆ, ವಿದೇಶಗಳಲ್ಲೂ ಹೌಸ್ ಫುಲ್ ಕಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ ಅದೇ ತಂಡ ಇದೀಗ ಕೋಸ್ಟಲ್ ವುಡ್ ನಲ್ಲಿ 'ಗಮ್ಜಾಲ್' ಮಾಡಲು ಮುಂದಾಗಿದೆ. 'ಗಮ್ಜಾಲ್' ಅನ್ನೋದೆ ಸಡಗರ, ಎಂಜಾಯ್ ಮೆಂಟ್ ಗೆ ಬಳಸಬಹುದಾದ ತುಳು ಪದ. ಕಳೆದ ವರ್ಷ ತೆರೆ ಕಂಡ ಭಾರಿ ಬಜೆಟ್ ನ 'ಸಾಹೋ' ಸಿನಿಮಾ ಕೂಡ 'ಗಿರಿಗಿಟ್' ಮುಂದೆ ಕರಾವಳಿಯಲ್ಲಿ ಠುಸ್ ಪಟಾಕಿ ಆಗಿದ್ದು ಇತಿಹಾಸ. ದಿನವೊಂದಕ್ಕೆ ಮಲ್ಟಿಫ್ಲೆಕ್ಸ್ ಗಳಲ್ಲಿ ಹತ್ತಕ್ಕೂ ಅಧಿಕ ಶೋಗಳಿದ್ರೂ, ವಾರವಿಡೀ ಟಿಕೆಟ್ ಗೆ ಕಾದು ಕುಳಿತವರಿದ್ದಾರೆ. ಇದೀಗ ಕೊರೊನಾ ಸಮಯದಲ್ಲಿ ಅದೇ ತಂಡ 'ಗಮ್ಜಾಲ್' ಸಿನಿಮಾ ಮೂಲಕ ತುಳು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಹಿಂದೆ 'ಸರ್ಕಸ್' ತಮ್ಮ ಮುಂದಿನ ಪ್ರಾಜೆಕ್ಟ್ ಎಂದಿದ್ದ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಈಗ ಪ್ರೇಕ್ಷಕರ ಮುಂದೆ 'ಗಮ್ಜಾಲ್' ತೆರೆದಿಡಲು ಮುಂದಾಗಿದ್ದಾರೆ. ಇಲ್ಲೂ ಮತ್ತದೇ 'ಗಿರಿಗಿಟ್' ತಂಡವನ್ನೇ ನೆಚ್ಚಿಕೊಂಡಿದ್ದಾರೆ. ಕಚಗುಳಿ ಇಡುವಂತಹ ಸಂಭಾಷಣೆ ಬರೆಯೋ ಪ್ರಸನ್ನ ಶೆಟ್ಟಿ ಅವರೇ ಇಲ್ಲೂ ಡೈಲಾಗ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಇಲ್ಲೂ ನಕ್ಕು ನಗಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಫೇಸ್ ಬುಕ್ ನಲ್ಲಿ 'ಗಮ್ಜಾಲ್' ಪೋಸ್ಟರ್ ಬಿಡುಗಡೆ ಮಾಡಿದ್ದು, 'ಪ್ಯಾಕೇಜ್ ಆಫ್ 2 ಮೂವೀಸ್' ಅನ್ನೋ ಅಡಿಬರಹ ಕುತೂಹಲ ಹೆಚ್ಚಿಸಿದೆ.
"ಸಿನಿಮಾ ಒಂದೇ ಆದರೆ ಅದರೊಳಗಿನ ಕಥೆ ಎರಡು" ಅನ್ನೋದಾಗಿ ಹೇಳುತ್ತಾ ನಾಯಕ ನಟ ಹಾಗೂ 'ಗಮ್ಜಾಲ್' ಸಿನಿಮಾದಲ್ಲಿ ಕಥೆ ಮತ್ತು ಚಿತ್ರಕಥೆ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ರೂಪೇಶ್ ಶೆಟ್ಟಿ ಪ್ರೇಕ್ಷಕರ ಕುತೂಹಲ ಡಬಲ್ ಅಗುವಂತೆ ಮಾಡಿದ್ದಾರೆ.
ಒಟ್ಟಿನಲ್ಲಿ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದೆ. ಒಟಿಪಿಯೋ, ಥಿಯೇಟರೋ ಅನ್ನೋ ಸಣ್ಣ ಕನ್ಫ್ಯೂಶನ್ ಶೀಘ್ರ ಕ್ಲಿಯರ್ ಆಗಲಿದೆ. 'ಗಿರಿಗಿಟ್' ಸೂಪರ್ ಹಿಟ್ ಬಳಿಕ ನಾಯಕ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಲಕ್ ಬದಲಾಗಿದೆ ಅನ್ನೋ ಮಾತು ಕೋಸ್ಟಲ್ ವುಡ್ ನಲ್ಲಿದೆ. ಆ ಲಕ್ ಗಮ್ಜಾಲ್ ನಲ್ಲಿ ಯಾವ ರೀತಿ ವರ್ಕೌಟ್ ಆಗುತ್ತೆ, ಪ್ರೇಕ್ಷಕ ಹೇಗೆ ಕೈ ಹಿಡೀತಾನೆ ಅನ್ನೋದೆ ಕುತೂಹಲ.
Kshetra Samachara
15/11/2020 08:42 pm