ಸುಳ್ಯ: ರೈತರು ಎದುರಿಸುವ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸುಳ್ಯ ತಾಲೂಕು ರೈತ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಸರಕಾರದಿಂದ ಘೋಷಣೆಯಾಗಿರುವ 2018-19ನೇ ಸಾಲಿನ ಸಾಲ ಮನ್ನಾ ಯೋಜನೆಯ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಬೇಕು ಸುಳ್ಯ ತಾಲೂಕಿನಲ್ಲಿ 700 ಮಂದಿಗೆ ಬಿಡುಗಡೆಗೆ ಬಾಕಿ ಇದೆ ಎಂದರು. ರೈತರ ಪಹಣಿ ಪತ್ರಿಕೆಯಲ್ಲಿ ಮೊಬೈಲ್ ತಂತ್ರಾಂಶದ ಮೂಲಕ ರೈತರು ಒಮ್ಮೆ ದಾಖಲಿಸಿದ ಬೆಳೆಯನ್ನು ಸಂಬಂಧಪಟ್ಟ ರೈತನ ಗಮನಕ್ಕೆ ತಾರದೆ ಸೂಕ್ತ ಪರಿಶೀಲನೆ ನಡೆಸದ ಬೇಕಾಬಿಟ್ಟಿ ತಿದ್ದುಪಡಿ ಮಾಡಬಾರದು, ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಪ್ರತಿ ವರ್ಷ ಬೆಳೆ ದಾಖಲಿಸುವ ಪದ್ಧತಿಯನ್ನು ಕೈ ಬಿಟ್ಟು ಕನಿಷ್ಠ 10 ಅವಧಿಗಾದರೂ ಉಳಿಸಿಕೊಂಡು ರೈತನು ಅಪೇಕ್ಷೆ ಪಟ್ಟಲ್ಲಿ ಮಾತ್ರ ಸೀಮಿತ ಪ್ರದೇಶದಲ್ಲಿ ಸರ್ವೆ ನಡೆಸಬೇಕು. ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಬೇಕು, ವಹವಾಮಾನ ಆಧಾರಿತ ಬೆಳೆ ವಿವಿಧ ತಾಂತ್ರಿಕ ಕಾರಣಗಳನ್ನೊಡ್ಡಿ ರೈತರಿಗೆ ವಿಮ ಪಾವತಿಯಾಗುತ್ತಿಲ್ಲ ಇದನ್ನು ಸರಿಪಡಿಸಬೇಕು. ರಸಗೊಬ್ಬರ, ಮೈಲು ತುತ್ತು ಸಹಿತ ಕ್ರಿಮಿಕೀಟನಾಶಕಗಳ ಖರೀದಿಗೆ ಸಹಾಯಧನ ನೀಡಬೇಕು, ವಿದ್ಯುತ್ ಚಾಲಿತ ನೀರಾವರಿ ಪಂಪುಗಳಿಗೆ ಉಚಿತ ವಿದ್ಯುತ್ ಪದ್ಧತಿಯನ್ನು ಮುಂದುವರಿಸಬೇಕು. ಸಹಕಾರಿ ಸಂಘಗಳಲ್ಲಿ ಬ್ಯಾಂಕುಗಳಲ್ಲಿ ಸಿಗತಕ್ಕ ಬೆಳೆಸಾಲ ಮಿತಿಯನ್ನು 3ಲಕ್ಷ ಮಿತಿಯಿಂದ 5 ಲಕ್ಷಕ್ಕೆ ಏರಿಸಬೇಕು. ಶೂನ್ಯ ಬಡ್ಡಿಯ ಸೌಲಭ್ಯಗಳನ್ನು ಮುಂದುವರಿಸುವುದಲ್ಲದೆ ಇತರೇ ಸಾಲಗಳ ಮಿತಿಯನ್ನೂ ಹೆಚ್ಚಿಸಬೇಕು, ರೈತರಿಗೆ ಅಗತ್ಯವುಳ್ಳ ಕೃಷಿ ಯಂತ್ರೋಪಕರಣಗಳಿಗೆ 50% ಸಹಾಯಧನದಲ್ಲಿ ಇಂಧನ ಗಳನ್ನು ಒದಗಿಸಬೇಕು. ಯಂತ್ರೋಪಕರಣ ಸಾಲಗಳಿಗೆ ಶೂನ್ಯ ಬಡ್ಡಿದರದಲ್ಲಿ ಕೊಡುವಂತಾಗಬೇಕು. ಕಿಸಾನ್ ಕಮಾನ್ ಪಹಣಿ ಹೊಂದಿದ ಪ್ರತಿಯೊಬ್ಬನಿಗೂ ದೊರಯುವಂತಾಗಬೇಕು. ಸಹಕಾರಿ ಸಂಘದ ಮಹಾಸಭೆಗಳಲ್ಲಿ ಭಾಗವಹಿಸದ ಸದಸ್ಯರಿಗೆ ಮತದಾನದ ಹಕ್ಕನ್ನು ನೀಡಬೇಕು. ಕೋವಿ ಪರವಾನಗಿ ನವೀಕರಣ ಶುಲ್ಕವನ್ನು ಹಿಂದಿನಂತೆ 100 ರೂಪಾಯಿಗೆ ನಿಗದಿಪಡಿಸಬೇಕು.ಅರ್ಹ ರೈತರಿಗೆ ಕೋವಿ ಪರವಾನಿಗೆ ಹೊಂದಲು ತಹಶೀಲ್ದಾರರಿಗೆ ಅಧಿಕಾರ ನೀಡಬೇಕು.ಕೃಷಿ ನಾಶ ಮಾಡುವ ಆನೆ , ಮಂಗ , ಹಂದಿ , ನವಿಲು ಮೊದಲಾದ ಪ್ರಾಣಿ ಪಕ್ಷಿಗಳಿಂದ ಆಗುತ್ತಿರುವ ಹಾವಳಿಯ ತಡೆಗೆ ಶೀಘ್ರ ಕ್ರಮಕೈಗೊಳ್ಳಬೇಕು.
ಹಳದಿರೋಗ ಪರಿಹಾರ ನೀಡಿ:
ಅಡಿಕೆಗೆ ಎಲೆ ಹಳದಿ ರೋಗದ ಬಾಧೆಯು ವರ್ಷ ವರ್ಷವೂ ವಿಸ್ತರಿಸುತ್ತಿದ್ದು ಇದರ ಬಗ್ಗೆ ಸಂಶೋಧನೆ ನಡೆಸಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕು.ಹಳದಿ ರೋಗದ ಬಗ್ಗೆ ರೈತರಿಗೆ ಸೂಕ್ತ ಸಲಹೆ , ಪರಿಹಾರಗಳ ಅಗತ್ಯವಿದೆ. ಅಡಿಕೆ ಹಳದಿ ರೋಗದ ಬಗ್ಗೆ ಕಳೆದ ವರ್ಷ ಘೋಷಣೆ ಮಾಡಿದ 25 ಕೋಟಿ ಬಜೆಟ್ ಅನುದಾನ ಬಿಡುಗಡೆಯಾಗಿರುವುದಿಲ್ಲ. ಈ ವರ್ಷ ಬಜೆಟ್‌ನಲ್ಲಿ ಯಾವುದೇ ಹಣ ಘೋಷಣೆಯೂ ಮಾಡಿಲ್ಲ .ಆದುದರಿಂದ ಜಿಲ್ಲಾಡಳಿತದ ಸರ್ವೆಯ ಮಾಹಿತಿ ಪ್ರಕಾರ ಸರಕಾರಕ್ಕೆ ಪರಿಹಾರ ನೀಡಲು ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ರೋಗ ಪೀಡಿತ ಪ್ರದೇಶದ ಸರ್ವೇ ಈಗಾಗಲೇ ಒಮ್ಮೆ ನಡೆದಿದ್ದು , ಅದರಿಂದ ಏನೇನು ಉಪಯೋಗವಾಗಿಲ್ಲ.ಈಗ ಹೊಸದಾಗಿ ಸರ್ವೇ ನಡೆಸಿ ವಾಸ್ತವ ಅಂಕಿ ಅಂಶಗಳನ್ನು ಸಂಗ್ರಹಿಸಿ ರೈತರಿಗೆ ಪರಿಹಾರಧನವನ್ನು ನೀಡಲೇಬೇಕಾಗಿದೆ. ಒಂದು ಬಾರಿಗೆ ಸಂಪೂರ್ಣ ಸಾಲ ಮನ್ನಾ ಮಾಡುವುದಲ್ಲದೆ ಹೊಸದಾಗಿ ಕೃಷಿ ಮಾಡಲು ನಿಬಡ್ಡಿಯಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಗ್ರಾಮ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರವನ್ನು ತೆರೆದು ವಿವಿಧ ಸೌಲಭ್ಯಗಳ ಮಾಹಿತಿ ಹಾಗೂ ಸಹಾಯಧನ ನೀಡಲು ಸಹಕರಿಸಬೇಕು . ಅಲ್ಲಿ ಮಣ್ಣು ಪರೀಕ್ಷೆ ಮಾಹಿತಿ ನೀಡಿ ,ಪರೀಕ್ಷೆಗೆ ಒಳಪಡಿಸಬೇಕು. ಇದರ ಆಧಾರದಲ್ಲಿ ಪೋಷಕಾಂಶಗಳ ನಿರ್ವಹಣೆಗೆ ತಜ್ಞರು ಮಾಹಿತಿ ನೀಡಬೇಕಾಗಿದೆ. ಪ್ರತಿ ಗ್ರಾಮಗಳಲ್ಲಿ ಗೋಶಾಲೆ ಹಾಗೂ ತಾಲೂಕು ಕೇಂದ್ರದಲ್ಲಿ ಗೋಶಾಲೆಯನ್ನು ಕೂಡಲೇ ವ್ಯವಸ್ಥೆಗೊಳಿಸಬೇಕು. ಗ್ರಾಮ ಕರಣಿಕರು ಪ್ರತಿ ಗ್ರಾಮದಲ್ಲಿ ಖಾಯಂ ಇರುವಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಈಗಾಗಲೇ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗವನ್ನು ಕೂಡಲೇ ಭೂಮಾಪನಾ ಇಲಾಖೆ ಪ್ಲಾಟಿಂಗ್ ಮಾಡಬೇಕು. ಈಗ ಪಹಣಿ ಪತ್ರವನ್ನು ಒಟ್ಟುಗೂಡಿಸುವಿಕೆ ಎಂದು ಮಾಡಿದ್ದಾರೆ. ಪಹಣಿ ದುರಸ್ಥಿ ಆಗುವವರೆಗೆ ಮಂಜೂರುದಾರನಿಗೆ ಏಕ ಮಾತ್ರ ಪಹಣಿ ಪತ್ರ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕೆ, ಮಂಜುನಾಥ ಮಡ್ತಿಲ, ಪೆರಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷ ಗೋಪಾಲ್ ಪೆರಾಜೆ ಉಪಸ್ಥಿತರಿದ್ದರು.
Kshetra Samachara
13/05/2022 05:07 pm