ಬೈಂದೂರು : ಕೊಲ್ಲೂರಿಗೆ ಯಾತ್ರಾರ್ಥಿಗಳಾಗಿ ಬಂದು, ಸೌಪರ್ಣಿಕಾ ನದಿಯಲ್ಲಿ ತೀರ್ಥ ಸ್ನಾನ ಮಾಡುವಾಗ ನದಿಪಾಲಾದ ಮಹಿಳೆಯ ಶವ ಭಾನುವಾರ ಮಧ್ಯಾಹ್ನ ಘಟನಾ ಸ್ಥಳದಿಂದ ಮೂರೂವರೆ ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ.
ಸಾಮಾಜಿಕ ಕಾರ್ಯಕರ್ತ, ಸಾಹಸಿಗ ಈಶ್ವರ್ ಮಲ್ಪೆ ಅವರು ಭಾರೀ ರಭಸದಿಂದ ಹರಿವ ನೀರಿನ ಸೆಳೆತವನ್ನೂ ಜಯಿಸಿ, ಸಾಹಸದಿಂದ ಶವ ಪತ್ತೆಹಚ್ಚಿದ್ದಾರೆ. ಅಗ್ನಿ ಶಾಮಕ ದಳದವರು, ಪೊಲೀಸರು, ಸ್ಥಳೀಯರು ಶವ ಪತ್ತೆಗಾಗಿ ಶ್ರಮಿಸಿದ್ದರೂ ಸುರಿವ ಜಡಿಮಳೆ, ಸೌಪರ್ಣಿಕಾ ನದಿಯ ಸೆಳೆತದಿಂದಾಗಿ ಕೈಚೆಲ್ಲಿದ್ದರು.
ಆದರೆ, ಈಶ್ವರ್ ಅವರು ತಮ್ಮ ಸಂಗಡಿಗರೊಂದಿಗೆ ಛಲ ಬಿಡದೆ, ಪ್ರತಿಕೂಲ ಹವಾಮಾನವನ್ನೂ ಲೆಕ್ಕಿಸದೆ ಕಾರ್ಯಾಚರಣೆ ನಡೆಸಿ ಮಹಿಳೆಯ ಶವವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ನದಿ ನೀರಿನ ಸೆಳೆತ ಜಾಸ್ತಿ ಇದ್ದುದರಿಂದ ಮತ್ತು ಬೆಳಕಿನ ಕೊರತೆಯಿಂದ ಅವರಿಗೆ ಶವವನ್ನು ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಶವವನ್ನು ಭದ್ರವಾಗಿ ಹಗ್ಗದಿಂದ ಮರಕ್ಕೆ ಬಿಗಿದು ಮರಳಿ ಬಂದಿದ್ದಾರೆ ಎನ್ನಲಾಗಿದೆ.
ಸಾಹಸಿಗ ಈಶ್ವರ್ ಮಲ್ಪೆಯವರೊಂದಿಗೆ ಮಿತ್ರರಾದ ಕೋಟ ನಾಗೇಂದ್ರ ಪುತ್ರನ್, ಅಂಬಾರಿ ರವಿ ಕೋಟ ಮತ್ತು ದೀಪಕ್ ಕಾಂಚನ್ ಹುಣಿಸೆಬೆಟ್ಟು ತಮ್ಮ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ್ದರು.
Kshetra Samachara
12/09/2022 08:09 am