ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ಸೈಂಟ್ ಸಿಸಿಲಿಯ ಹೈಸ್ಕೂಲು ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ತೀವ್ರವಾಗಿ ಗಾಯಗೊಂಡಿದ್ದಾನೆ.ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ.
ಘಟನೆಯ ವಿವರ: ಎಂದಿನಂತೆ ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ ಆದಿತ್ಯನಿಗೆ ಅಂಬಲಪಾಡಿ ಜಂಕ್ಷನ್‌ನಲ್ಲಿ ಅತೀ ವೇಗದಿಂದ ಬಂದ ಬೊಲೆರೋ ಟೆಂಪೊ ಡಿಕ್ಕಿ ಹೊಡೆದಿದೆ. ಬಾಲಕ ತೀವ್ರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ತಕ್ಷಣ ಸಮೀಪದ ಹೈಟೆಕ್ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಅಲ್ಲಿನ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ಟೆಂಪೋ ಚಾಲಕನ ಅತೀ ವೇಗದ ಚಾಲನೆಯೇ ದುರ್ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶು ಶೆಟ್ಟಿ ಅವರ ದೂರಿನ ಮೇರೆಗೆ ಪ್ರಕರಣ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Kshetra Samachara
05/07/2022 02:21 pm