ಮಂಗಳೂರು: ನಗರದ ಅರ್ಕುಳ ವ್ಯಾಪ್ತಿಯ ಬಳಿಯ ನೇತ್ರಾವತಿ ನದಿಯಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಉತ್ತರಪ್ರದೇಶ ಮೂಲದ ಕಾರ್ಮಿಕನೋರ್ವನು ನಾಪತ್ತೆಯಾಗಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಪಾರಾಗಿದ್ದಾರೆ.
ಉತ್ತರ ಪ್ರದೇಶ ಮೂಲದ ರಾಜು ಸಾಹ್ ನಾಪತ್ತೆಯಾದ ಕಾರ್ಮಿಕ. ಇಂದು ಮಧ್ಯಾಹ್ನ ಅರ್ಕುಳ ಗ್ರಾಮದ ನೇತ್ರಾವತಿ ನದಿಯಲ್ಲಿನ ಶಶಿರಾಜ್ ಎಂಬವರ ಧಕ್ಕೆಯಲ್ಲಿ ಈ ಹಿಂದೆ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಲಾಗುತ್ತಿತ್ತು. ಆದರೆ ವಿಪರೀತ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ನೆರೆ ನೀರು ತುಂಬಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮೂಲದ ರಾಜು ಸಾಹ್, ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಎಂಬವರು ಮರಳುಗಾರಿಕಾ ದೋಣಿಯನ್ನು ದಡಕ್ಕೆ ತರುತ್ತಿದ್ದರು.
ಈ ವೇಳೆ ನೇತ್ರಾವತಿ ನದಿಯ ನೀರಿನ ರಭಸ ಹೆಚ್ಚಾಗಿ ದೋಣಿ ಸಹಿತ ಮೂವರೂ ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಮೊಂತು ಸಾಹ್ ಮತ್ತು ನಾಗೇಂದ್ರ ಕುಮಾರ್ ಸಾಯನಿ ಅಡ್ಯಾರ್ - ಪಾವೂರು ಸೇತುವೆಯಡಿಯಲ್ಲಿ ಸಿಲುಕಿ ಈಜಿ ದಡ ಸೇರಿ ಪಾರಾಗಿದ್ದಾರೆ. ಆದರೆ ರಾಜು ಸಾಹ್ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತನ ಶೋಧ ಕಾರ್ಯ ನಡೆಯುತ್ತಿದೆ.
Kshetra Samachara
02/07/2022 10:11 pm