ಸುರತ್ಕಲ್: ಮದ್ಯದ ಮತ್ತಿನಲ್ಲಿ ಅತಿ ವೇಗವಾಗಿ ಯದ್ವಾತದ್ವಾ ಬೃಹತ್ ಟ್ರಕ್ ಚಲಾಯಿಸಿ ಸರಣಿ ಅಪಘಾತ ನಡೆಸಿರುವ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಟ್ರಕ್ ಚಾಲಕ ಕೈಲಾಶ್ ಪಾಟೀಲ್ (42) ಬಂಧಿತ ಆರೋಪಿ. ಇನ್ನು ಟ್ರಕ್ ಕ್ಲೀನರ್ ಪರಾರಿಯಾಗಿದ್ದಾನೆ. ಇಂದು (ಬುಧವಾರ) ರಾತ್ರಿ 16 ಚಕ್ರಗಳ ಟ್ರಕ್ ಪಣಂಬೂರು ಕಡೆಯಿಂದ ಎಂಆರ್‌ಪಿಎಲ್ ಕಡೆಗೆ ಸಂಚರಿಸುತ್ತಿತ್ತು. ಆದರೆ ಮದ್ಯ ಮತ್ತಿನಲ್ಲಿ ಚಾಲಕ ಅತಿ ವೇಗವಾಗಿ ಯದ್ವಾತದ್ವಾ ಟ್ರಕ್ ಚಲಾಯಿಸಿಕೊಂಡು ಬಂದು ಸರಣಿ ಅಪಘಾತ ನಡೆಸಿದ್ದಾನೆ.
ಸುರತ್ಕಲ್ ಜಂಕ್ಷನ್‌ನಲ್ಲಿ ದ್ವಿಚಕ್ರ ಸವಾರನೋರ್ವನಿಗೆ ಡಿಕ್ಕಿ ಹೊಡೆದು ಬಳಿಕ ಪೊಲೀಸ್, ಪೆಟ್ರೋಲ್ ವಾಹನಕ್ಕೆ ಗುದ್ದಿದ್ದಾನೆ. ಈ ವೇಳೆ ಪೊಲೀಸರು ಟ್ರಕ್ ನಿಲ್ಲಿಸಲು ಯತ್ನಿಸಿದರೂ ಚಾಲಕ ನಿಲ್ಲಿಸದೆ ಕಾನದತ್ತ ಪರಾರಿಯಾಗಿದ್ದಾನೆ. ಈ ಸಂದರ್ಭ ಸುರತ್ಕಲ್ ರೈಲ್ವೇ ಬ್ರಿಡ್ಜ್ ಬಳಿ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಮೂವರಿಗೆ ಗಾಯವಾಗಿತ್ತು. ಇದಕ್ಕೂ ಮುನ್ನ ಬೈಕಂಪಾಡಿ ಹಾಗೂ ಸುರತ್ಕಲ್ ಬಸ್ ನಿಲ್ದಾಣದ ಬಳಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
02/06/2022 10:59 pm