ಉಳ್ಳಾಲ:ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಷವಾಗಿ ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲಂತಸ್ತಿನ ಗೋಡೆಗೆ ಪೈಂಟ್ ಬಳಿಯುತ್ತಿದ್ದ ಕಾರ್ಮಿಕ ಕಟ್ಟಡದಿಂದ ಎಸೆಯಲ್ಪಟ್ಟು ದಾರುಣ ಸಾವಿಗೀಡಾದ ಘಟನೆ ಕೊಲ್ಯ ,ಮಳಯಾಳಚಾಮುಂಡಿ ದೈವಸ್ಥಾನದ ಬಳಿಯ ಅಡ್ಕ ಬೈಲ್ ಎಂಬಲ್ಲಿ ನಡೆದಿದೆ.
ಮನೆಯ ಬದಿಯಲ್ಲೇ ಹಾದು ಹೋದ ಹೈಟೆನ್ಷನ್ ತಂತಿ ಸ್ಪರ್ಶದಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮಂಜನಾಡಿ ಗ್ರಾಮದ ಮಂಗಳಾಂತಿ ನಗರದ ಕಟ್ಟೆಮಾರ್ ಹೌಸ್ ನಿವಾಸಿ ಝುಲ್ಪಿಕಾರ್ ಆಲಿ(29) ಸಾವನ್ನಪ್ಪಿದ ದುರ್ದೈವಿ.
ಕೊಲ್ಯದ ಬಾಳೆ ಹಣ್ಣಿನ ವ್ಯಾಪಾರಿ ಗಣೇಶ್ ಎಂಬವರು ಅಡ್ಕ ಬೈಲ್ ಎಂಬಲ್ಲಿ ಮನೆ ನಿರ್ಮಿಸುತ್ತಿದ್ದು ,ಎಂದಿನಂತೆ ನಿರ್ಮಾಣ ಹಂತದ ಮನೆಯ ಕಟ್ಟಡದಲ್ಲಿ ಮಾರ್ಬಲ್ ಮತ್ತು ಪೈಂಟಿಂಗ್ ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಹೊರಗಡೆ ಮನೆಯ ಮೇಲಂತಸ್ತಿನ ಗೋಡೆಗೆ ರೋಲರ್ ನಿಂದ ಪೈಂಟ್ ಹೊಡೆಯುತ್ತಿದ್ದ ಝುಲ್ಫಿಕಾರ್ ಹಠಾತ್ತನೆ ಕೆಳಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಆಸ್ಪತ್ರೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಝುಲ್ಪಿಕಾರ್ ಪೈಂಟ್ ಬಳಿಯುತ್ತಿದ್ದ ಕಟ್ಟಡದ ಹತ್ತಿರದಿಂದಲೇ ಹೈಟೆನ್ಷನ್ ತಂತಿ ಹಾದು ಹೋಗಿದ್ದು ತಂತಿ ಸ್ಪರ್ಶದಿಂದಲೇ ಘಟನೆ ನಡೆದಿದೆಯೆಂದು ಶಂಕಿಸಲಾಗಿದೆ.ಅಲ್ಲದೆ ನಿರ್ಮಾಣ ಹಂತದ ಮನೆ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರಂ ಕೂಡ ಇದೆ.ಕಟ್ಟಡದಿಂದ ಕೆಳಗೆ ಎಸೆಯಲ್ಪಟ್ಟ ಝುಲ್ಪಿಕಾರ್ ಅವರು ಕಲ್ಲಿನ ಆವರಣ ಗೋಡೆ ಮೇಲೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.
ಗಣೇಶ್ ಅವರು ನಿಯಮಗಳನ್ನ ಗಾಳಿಗೆ ತೂರಿ ಮನೆಯನ್ನು ನಿರ್ಮಿಸಿರುವ ಆರೋಪ ಕೂಡ ಕೇಳಿ ಬಂದಿದೆ.
ಸೆಟ್ ಬ್ಯಾಕ್ ಬಿಡದೆ ಮನೆ ಕಟ್ಟಡ ನಿರ್ಮಿಸಿದ್ದೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ,ಮರಣೋತ್ತರ ಪರೀಕ್ಷೆ ವರದಿ ಬರೋ ಮೊದಲೇ ಬಿದ್ದು ಸತ್ತಿರೋದಾಗಿ ಕೆಲವರು ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Kshetra Samachara
31/05/2022 09:09 pm