ಕೋಟ: ಕುಂದಾಪುರದ ಮೊಳಹಳ್ಳಿಯ ಕೈಲೇರಿ ಎಂಬಲ್ಲಿ ಎರಡೂವರೆ ವರ್ಷದ ಮಗುವೊಂದು ದನದ ಕೊಟ್ಟಿಗೆಯ ಸೆಗಣಿ ನೀರು ಹೋಗುವ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ನಿನ್ನೆ ಸಂಜೆ ನಡೆದಿದೆ.
ಬಿಹಾರ ಮೂಲದ ಲಾಲ್ ಬಿಹಾರಿ ಎಂಬವರ ಪುತ್ರ ಎರಡೂವರೆ ವರ್ಷದ ಅನುರಾಜ್ ಮೃತಪಟ್ಟ ಮಗು. ಬಿಹಾರ ರಾಜ್ಯದ ಕೆಸವರ್ ಪುರ್ ಆರಾ ಜಿಲ್ಲೆಯ ಲಾಲ್ ಬಿಹಾರಿ ಅವರು ಹಲವು ಸಮಯದಿಂದ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕುಂದಾಪುರದ ಮೊಳಹಳ್ಳಿಯ ಕೈಲೇರಿ ಮಾವಿನಕಟ್ಟೆಯಲ್ಲಿರುವ ಮನೆಯೊಂದರಲ್ಲಿ ಹೈನುಗಾರಿಕೆ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ.
ಇವರು ಕೆಲಸ ಮಾಡುತ್ತಿದ್ದ ಹಟ್ಟಿಯಲ್ಲಿ ಸುಮಾರು 30 ದನಗಳಿದ್ದು, ಯಾವಾಗಲೂ ಹಟ್ಟಿಯನ್ನು ಲಾಲ್ ಬಿಹಾರಿ ಅವರೇ ಸ್ವಚ್ಛಗೊಳಿಸುತ್ತಿದ್ದರು. ಹಟ್ಟಿಯ ಆ ನೀರು ಅಲ್ಲೇ ಹಿಂದೆ ಇರುವ ಹೊಂಡದಲ್ಲಿ ತುಂಬುತ್ತಿತ್ತು. ಬಳಿಕ ಆ ನೀರನ್ನು ಖಾಲಿ ಮಾಡಲಾಗುತ್ತಿತ್ತು. ಆದರೆ ನಿನ್ನೆ ವಿದ್ಯುತ್ ಸರಬರಾಜು ಇಲ್ಲದ ಕಾರಣ ನೀರು ಖಾಲಿ ಮಾಡಲು ಸಾಧ್ಯವಾಗಿರಲಿಲ್ಲ. ಸಂಜೆ 5 ಗಂಟೆಗೆ ಮನೆಯಿಂದ ಹೊರಗೆ ಬಂದು ನೋಡುವಾಗ ಮಗ ಅನುರಾಜ್ ನ ಪಾದರಕ್ಷೆ ಹಟ್ಟಿಯ ನೀರು ಹೋಗುವ ಹೊಂಡದ ಬಳಿ ಇರುವುದು ಗಮನಕ್ಕೆ ಬಂದಿದೆ.
ಇದರಿಂದ ಸಂಶಯಗೊಂಡು ಸಗಣಿ ನೀರಿನ ಹೊಂಡಕ್ಕೆ ಇಳಿದು ನೋಡಿದಾಗ ಮಗು ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಂಡು ಬಂದಿದೆ.ಕೂಡಲೇ ಮಗುವನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/01/2022 10:51 am