ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ಸರಣಿ ಅಪಘಾತ ನಡೆದಿದ್ದು, ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಮಂಗಳೂರಿಂದ ಉಡುಪಿ ಕಡೆಗೆ ಬರುತ್ತಿದ್ದ ಲಾರಿಯು ಮುಲ್ಕಿ ಬಸ್ ನಿಲ್ದಾಣದ ಜಂಕ್ಷನ್ ಬಳಿ ಏಕಾಏಕಿ ನಿಲುಗಡೆಯಾಗಿದ್ದು, ಹಿಂದಿನಿಂದ ಅದೇ ದಿಕ್ಕಿನಲ್ಲಿ ಬರುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ. ಈ ಸಂದರ್ಭ ರಿಕ್ಷಾದ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಲಾರಿ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ರಿಕ್ಷಾದ ಎದುರು ಭಾಗ ಹಾಗೂ ಹಿಂದಿನ ಭಾಗ ಜಖಂಗೊಂಡಿದೆ. ಈ ಸಂದರ್ಭ ರಿಕ್ಷಾದಲ್ಲಿದ್ದ ಚಾಲಕ ಹಳೆಯಂಗಡಿ ಸಮೀಪದ ಲೈಟ್ ಹೌಸ್ ಬಳಿಯ ನಿವಾಸಿ ಮೋಹನದಾಸ ಹಾಗೂ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.
ರಿಕ್ಷಾದಲ್ಲಿದ್ದ ಪ್ರಯಾಣಿಕರು ಹಳೆಯಂಗಡಿ ಕಡೆಯಿಂದ ಮುಲ್ಕಿಯ ಬಪ್ಪನಾಡು ಕಡೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತದಿಂದಾಗಿ ಕೆಲಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಪಘಾತವಾದ ವಾಹನಗಳ ತೆರವಿಗೆ ಟ್ರಾಫಿಕ್ ಪೊಲೀಸರ ವಿಳಂಬ ನೀತಿ ಖಂಡಿಸಿ ಸ್ಥಳದಲ್ಲಿದ್ದ ನಾಗರಿಕರು ಆಕ್ರೋಶಗೊಂಡು ಬಳಿಕ ಸ್ಥಳಕ್ಕೆ ಆಗಮಿಸಿದ ಮುಲ್ಕಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿದ್ದ ದಲಿತ ಸಂಘರ್ಷ ಸಮಿತಿಯ ಮುಖಂಡ ಸೂರ್ಯ ಪ್ರಕಾಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಮುಲ್ಕಿ ಬಸ್ ನಿಲ್ದಾಣದ ಬಳಿ ಅವ್ಯವಸ್ಥೆಯಿಂದ ಕೂಡಿದ್ದು ಅನೇಕ ಅಪಘಾತಗಳು ಸಂಭವಿಸಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ ಎಂದರು. ಸಾಮಾಜಿಕ ಕಾರ್ಯಕರ್ತ ಅಬ್ದುರ್ರಝಾಕ್ ಮಾತನಾಡಿ, ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅರ್ಧಂಬರ್ಧ ಕಾಮಗಾರಿಯಿಂದಾಗಿ ನಾಗರಿಕರು ಬವಣೆ ಪಡುವಂತಾಗಿದೆ. ಹೆದ್ದಾರಿಯಲ್ಲಿ ಅನೇಕ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿದ್ದು, ಹೆದ್ದಾರಿ ಇಲಾಖೆ ಅಧಿಕಾರಿಗಳು ಕೇವಲ ಟೋಲ್ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಅನೇಕ ಬಾರಿ ಶಾಸಕರಿಗೆ, ಸಂಸದರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದರು.
Kshetra Samachara
20/02/2021 09:06 pm