ಕೋಟ: ಸೋಮವಾರ ರಾತ್ರಿ ಕೊರಗ ಸಮುದಾಯದ ಕುಟುಂಬದ ಮೆಹೆಂದಿ ಕಾರ್ಯಕ್ರಮದಲ್ಲಿ ಏಕಾಏಕಿ ನುಗ್ಗಿ ಲಾಠಿ ಜಾರ್ಜ್ ನಡೆಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಜಿಲ್ಲಾ ದಂಡಾಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರನ್ನು ಕೆಲಸದಿಂದ ವಜಾಗೊಳಿಸಲು ಆಗ್ರಹಿಸಿ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪೊಲೀಸರ ದೌರ್ಜನ್ಯದಲ್ಲಿ ಮದುಮಗ ಸೇರಿದಂತೆ ವೃದ್ಧರು,ಮಕ್ಕಳು,ಮಹಿಳೆಯರು ಗಾಯಗೊಂಡಿದ್ದಾರೆ. ಇದರ ಹೊರತಾಗಿ ಕೊರಗ ಸಮುದಾಯದ ನಾಲ್ವರು ಸ್ಥಳೀಯರನ್ನು ಪೊಲೀಸರು ಠಾಣೆಗೆ ಕರೆದೊಯ್ದು ಲಾಕಪ್'ಗೆ ದೂಡಿ ಅರೆನಗ್ನಗೊಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಸಿದ್ದಾರೆ. ಈ ರೀತಿಯ ಅನಾಗರಿಕ ಕೃತ್ಯಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೇಯಕೃತ್ಯವಾಗಿದೆ. ಕೊರಗ ಸಮುದಾಯ ಈ ಪ್ರದೇಶದ ಅತ್ಯಂತ ಹಳೆಯ ಬುಡಕಟ್ಟು ಸಮುದಾಯವಾಗಿದೆ. ಈ ಬುಡಕಟ್ಟು ಸಮುದಾಯ ಇತಿಹಾಸದಾದ್ಯಂತ ಅತ್ಯಂತ ಹೆಚ್ಚು ಶೋಷಣೆಗೆ ಗುರಿಯಾದ ಸಮುದಾಯವಾಗಿದೆ, ಅಲ್ಲದೆ ಅವರ ಶೋಷಣೆ ಈಗಲೂ ಮುಂದುವರಿದಿದೆ. ಅಜಲಿನಂತಹ ಅನಿಷ್ಟ ಪದ್ಧತಿಗಳು ಈ ಸಮುದಾಯದ ಶೋಷಣೆಗೆ ಜ್ವಲಂತ ಉದಾಹರಣೆ. ಅಪೌಷ್ಟಿಕತೆ ಈ ಶೋಷಿತ ಸಮುದಾಯದ ಬೆಂಬಿಡದ ಭೂತ. ಈ ಅಪೌಷ್ಟಿಕತೆ ಪರಿಣಾಮವಾಗಿ ಕೊರಗರು ನಿರಂತರ ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಈ ಬುಡಕಟ್ಟಿನ ಜನಸಂಖ್ಯೆ ನಿರಂತರ ಕುಸಿಯುತ್ತಿದೆ. ಸರಕಾರ ಮತ್ತು ಕೆಲವು ಜೀವಪರ ಸಂಘಸಂಸ್ಥೆಗಳ ಪ್ರಯತ್ನದ ಫಲವಾಗಿ ಇತ್ತೀಚೆಗಷ್ಟೇ ಕೊರಗರು ಮುಖ್ಯವಾಹಿನಿಗೆ ತೆರೆದುಕೊಳ್ಳುತ್ತಿದ್ದಾರೆ. ಕೊರಗ ಯುವ ಜನತೆ ಶ್ರೈಕ್ಷಣಿಕ, ಅರ್ಥಿಕ, ಸಾಮಾಜಿಕ ಸಬಲೀಕರಣದತ್ತ ಮುಖ ಮಾಡುತ್ತಿದ್ದಾರಷ್ಟೇ. ಇಂತಹ ಸನ್ನಿವೇಶದಲ್ಲಿ ಈ ದುರ್ಬಲ ಸಮುದಾಯಕ್ಕೆ ರಕ್ಷಕರಾಗಿ, ಬೆನ್ನೆಲುಬಾಗಿ ಇರಬೇಕಾದ ಪೊಲೀಸ್ ಇಲಾಖೆ ಅವರನ್ನು ಪುನಃ ಭಯಭೀತಗೊಳಿಸಿ ಕತ್ತಲಿನ ಕೂಪಕ್ಕೆ ತಳ್ಳಲು ಹೊರಟಿರುವುದು ಅಮಾನವೀಯ.
ಆರೋಪಿ ಪೋಲಿಸರನ್ನು ಅಮಾನತಿನಲ್ಲಿಟ್ಟು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕೆಲಸದಿಂದ ವಜಾಗೊಳಿಸಿ ಶೋಷಿತ ಸಮುದಾಯದಲ್ಲಿ ಧೈರ್ಯ ತುಂಬಬೇಕಾಗಿ ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಆಗ್ರಹಿಸಿದೆ.
Kshetra Samachara
30/12/2021 07:53 pm