ಕಾರ್ಕಳ: ಕಾರ್ಕಳ ತಾಲೂಕಿನಿಂದ ಬೇರ್ಪಟ್ಟ ಹೆಬ್ರಿ ತಾಲೂಕು ಇದೀಗ ಪೂರ್ಣ ಪ್ರಮಾಣ ತಾಲೂಕು ಕೇಂದ್ರವಾಗುವತ್ತ ಸಾಗಿದ್ದು, ಕೇಂದ್ರದ ಜನರ ಬಹುಬೇಡಿಕೆಯ ಹೆಬ್ರಿ ಹೋಬಳಿ ರಚನೆಯ ಬಳಿಕ ಇದೀಗ ಅಟಲ್‌ಜೀ ಜನಸ್ನೇಹಿ ಕೇಂದ್ರ (ನಾಡಕಚೇರಿ) ಕಾರ್ಯಾರಂಭಗೊಳ್ಳುತ್ತಿದೆ ಎಂದು ಕಾರ್ಕಳ ಶಾಸಕರಾಗಿರುವ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ತಾಲೂಕಿನ ಸಾರ್ವಜನಿಕರಿಗೆ ತ್ವರಿತ ಹಾಗೂ ನಿಗದಿತ ಕಾಲಮಿತಿಯಲ್ಲಿ ಸರಕಾರಿ ಸೇವೆಗಳು ಲಭ್ಯವಾಗಬೇಕೆಂಬ ಮಹತ್ವಾಕಾಂಕ್ಷಿಯಿಂದ ಸಚಿವರ ವಿಶೇಷ ಮುತುವರ್ಜಿ ಹಾಗೂ ಸತತ ಪ್ರಯತ್ನದಿಂದ ನಾಡಕಚೇರಿ ಪ್ರಾರಂಭವಾಗುತ್ತಿದೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಬ್ರಿ ತಾಲೂಕು ರಚನೆಗೊಂಡು ತಾಲೂಕು ಕಚೇರಿ ಪ್ರಾರಂಭವಾಗಿದ್ದರೂ, ತಾಲೂಕಿನ ಹೆಚ್ಚಿನ ಗ್ರಾಮಗಳು ಅಜೆಕಾರು ಹೋಬಳಿಗೆ ಸೇರಿತ್ತು. ಹೀಗಾಗಿ ಹೆಬ್ರಿ ತಾಲೂಕಿನ ಸಾರ್ವಜನಿಕರು ಕಂದಾಯ ಇಲಾಖೆಯ ಸೇವೆ ಪಡೆಯಲು ಅಜೆಕಾರು ನಾಡಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕಿತ್ತು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಎರಡೂ ಕಡೆ ಒಬ್ಬರೇ ಕಂದಾಯ ನಿರೀಕ್ಷಕರು ಕರ್ತವ್ಯ ನಿರ್ವಹಿಸಬೇಕಿತ್ತು.
ಇದೀಗ ಹೆಬ್ರಿ ತಾಲೂಕಿಗೆ ಹೆಬ್ರಿ ಹೋಬಳಿ ರಚನೆಯಾಗಿದ್ದು, ಹೆಬ್ರಿ ತಾಲೂಕು ಕಚೇರಿಯಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಅಕೃತವಾಗಿ ಕಾರ್ಯಾರಂಭ ಮಾಡಲಿರುವುದರಿಂದ ಹೆಬ್ರಿ ತಾಲೂಕು ಕೇಂದ್ರದಲ್ಲಿಯೇ ಕಂದಾಯ ಸೇವೆಗಳು ಲಭ್ಯವಾಗಲಿವೆ. ಅಲ್ಲದೇ ಹೆಬ್ರಿ ಕೇಂದ್ರ ಸ್ಥಾನಕ್ಕೆ ಓರ್ವ ಕಂದಾಯ ನಿರೀಕ್ಷಕರು ಹಾಗೂ ಇನ್ನಿತರ ಹುದ್ದೆಗಳು ಸೃಷ್ಟಿಯಾಗಲಿವೆ.
ಇದರಿಂದ ತಾಲೂಕಿನ ಸಾರ್ವಜನಿಕರಿಗೆ ತ್ವರಿತ ಹಾಗೂ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಸಚಿವರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Kshetra Samachara
28/05/2022 08:53 pm