ಉಡುಪಿ: ಹೆಜಮಾಡಿ ಹಾಗೂ ಆಸುಪಾಸಿನ ಗ್ರಾಮಗಳ ಮೀನುಗಾರರ ಸುಮಾರು 45 ವರ್ಷಗಳ ಸತತ ಪ್ರಯತ್ನದ ಫಲವಾಗಿ ಸಾಕಾರವಾಗಲಿರುವ 180.8 ಕೋಟಿ ರೂ. ವೆಚ್ಚದ ಹೆಜಮಾಡಿ ಸರ್ವಋತು ಮೀನುಗಾರಿಕೆ ಬಂದರು ಕಾಮಗಾರಿಗೆ ಜ. 19ರಂದು ಬೆಳಿಗ್ಗೆ 9ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಲಿದ್ದಾರೆ.
ಬಂದರು- ಮೀನುಗಾರಿಕೆ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಸಹಿತ ಜಿಲ್ಲೆಯ ಶಾಸಕರೆಲ್ಲರೂ ಭಾಗವಹಿಸುವರು.
ಮೀನುಗಾರಿಕೆ ಇಲಾಖೆಗೆ ಸೇರಿರುವ ಸುಮಾರು 70 ಎಕರೆ ಜಾಗದಲ್ಲಿನ ಆಯ್ದ ಭೂಮಿಯಲ್ಲಿ ಸುಸಜ್ಜಿತ ಜೆಟ್ಟಿ, ಬ್ರೇಕ್‌ವಾಟರ್, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್ ಮೆನ್ ಶೆಡ್, ಕಚೇರಿ, ಶೌಚಾಲಯ, ಕ್ಯಾಟರಿಂಗ್ ಸೌಲಭ್ಯಗಳೊಂದಿಗೆ ಹೆಜಮಾಡಿ ಬಂದರಿನ ನಿರ್ಮಾಣವಾಗಲಿದೆ.
ಚೆನ್ನೈನ ಶ್ರೀಪತಿ ಅಸೋಸಿಯೇಟ್ಸ್ ಕಂಪೆನಿ ಟೆಂಡರ್ ಮೂಲಕ ಈ ಯೋಜನೆಯನ್ನು ಮೂರು ವರ್ಷಗಳಲ್ಲಿ ಕಾರ್ಯಗತಗೊಳಿಸಲಿದೆ ಎಂದು ಬಂದರು ಹಾಗೂ ಮೀನುಗಾರಿಕೆ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉದಯ ಕುಮಾರ್ ತಿಳಿಸಿದ್ದಾರೆ.
ಮಂಗಳೂರು, ಮಲ್ಪೆ ಇತ್ಯಾದಿ ಭಾಗದ ಮೀನುಗಾರರು ತಮ್ಮ ಕಾಯಕದ ನಡುವೆ ಸಮುದ್ರದಲ್ಲಿ ಹಂಚಿ ಹೋಗುತ್ತಾರೆ. ಮಳೆಗಾಲದ ಭಾರಿ ಮಳೆ, ಬಿರುಗಾಳಿ, ಪ್ರಕ್ಷುಬ್ಧ ವಾತಾವರಣದಲ್ಲಿ ದಡ ಸೇರಲು ಮಲ್ಪೆ ಅಥವಾ ಮಂಗಳೂರು ಮೀನುಗಾರಿಕೆ ಬಂದರಿಗೇ ಧಾವಿಸಬೇಕಿತ್ತು. ಹಾಗಾಗಿ ಉಭಯ ಜಿಲ್ಲೆಗಳ ಮಧ್ಯಭಾಗದಲ್ಲಿ ಸರ್ವಋತು ಮೀನುಗಾರಿಕೆ ಬಂದರಿನ ಅವಶ್ಯಕತೆ ಮನಗಂಡು ದಿ. ಸೋಮಪ್ಪ ಸುವರ್ಣರು ಮೂಲ್ಕಿ-ಮೂಡುಬಿದಿರೆ ಶಾಸಕರಾಗಿದ್ದ ವೇಳೆಯಲ್ಲೇ ಹೆಜಮಾಡಿ ಮೀನುಗಾರಿಕೆ ಜೆಟ್ಟಿಗೆ ಅನುಮೋದನೆಯೂ ದೊರೆಯಿತು. ಮುಂದೆ ಜಯಪ್ರಕಾಶ್ ಹೆಗ್ಡೆ, ದಿ.ವಸಂತ ಸಾಲ್ಯಾನ್ ಮೀನುಗಾರಿಕೆ ಮಂತ್ರಿಗಳಾಗಿದ್ದಾಗ 99 ಕೋಟಿ ರೂ.ನ ಜೆಟ್ಟಿ ಹೆಜಮಾಡಿ ಕೋಡಿಯಲ್ಲಿ ನಿರ್ಮಾಣಗೊಂಡು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಲೋಕಾರ್ಪಣೆಗೊಂಡಿತ್ತು. ಮುಂದೆ ಇಲ್ಲಿ ಹೂಳಿನ ಸಮಸ್ಯೆ ಅಧಿಕವಾಗಿ ಬೋಟುಗಳ ಒಳ, ಹೊರ ಸಂಚಾರಕ್ಕೆ ತೀರಾ ಅಡಚಣೆಗಳಾದವು. ಈಗ ಈ ಯೋಜನೆ ಕಾರ್ಯಗತಗೊಳ್ಳುತ್ತಿರುವುದು ಈ ಭಾಗದ ಮೀನುಗಾರರಿಗೆ ಖುಷಿ ತಂದಿದೆ.
Kshetra Samachara
17/01/2021 12:40 pm