ಕುಂದಾಪುರ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಮಿತಿ, ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಪಂಗಡ ಅದಿವಾಸಿ ಬುಡಕಟ್ಟು ಜನರಿಗೆ 'ಕಾನೂನು ಅರಿವು ಮಾಹಿತಿ ಕಾರ್ಯಾಗಾರ' ನಡೆಯಿತು.
ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್. ಮಾತನಾಡಿ, ಆದಿವಾಸಿಗಳಾದ ಕೊರಗ ಸಮುದಾಯವು ಇಂದಿಗೂ ನಿರೀಕ್ಷಿತ ಮಟ್ಟದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂದೇಶದಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಮೂಲಮಂತ್ರವಾಗಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣವೇ ಪ್ರಮುಖ ಆಯುಧ ಎಂಬ ಎಲ್ಲ ಮಹನೀಯರ ಆದರ್ಶ ಪಾಲಿಸಬೇಕು ಎಂದು ಹೇಳಿದರು.
ಸರಕಾರ ಆದಿವಾಸಿಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದು ಶಿಕ್ಷಣ ಪಡೆಯುವ ಮೂಲಕ ಅದನ್ನು ಪಡೆಯಲು ಸಾಧ್ಯವಿದೆ. ಪಟ್ಟಣ ಪ್ರದೇಶದ ಸಂಪರ್ಕವಿಲ್ಲದೆ ಕಾಡುಪ್ರದೇಶದಲ್ಲಿ ಬದುಕುವ ಆದಿವಾಸಿಗಳಿಗೆ ಬದುಕಿನ ವಿವಿಧ ಮಜಲುಗಳನ್ನು, ಪೀಳಿಗೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಕಾನೂನು ಮತ್ತು ಶಿಕ್ಷಣ ಅವಶ್ಯಕತೆ ಇದೆ ಎಂದರು.
ಪ.ಪಂಗಡ, ಬುಡಕಟ್ಟು ಸಮುದಾಯಕ್ಕೆ ಹಲವು ಯೋಜನೆಗಳಿವೆ. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸ್ವ ಉದ್ಯೋಗ ಸಹಿತ ವಿವಿಧ ಉದ್ಯಮಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವವರಿಗೆ ಪೂರ್ವ ತರಬೇತಿ ಸಹಿತ ವಿವಿಧ ಯೋಜನೆಗಳಿವೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ಮಿಸುವ ಪ.ಪಂಗಡದ ನಿರ್ದೇಶಕ, ನಿರ್ಮಾಪಕರಿಗೆ 15 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಗುರುತರ ಜವಬ್ದಾರಿ ಹಾಗೂ ಸಾಮಾಜಿಕ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.
Kshetra Samachara
29/08/2022 07:39 pm