ಕಾಪು: ಬೆಳಪು ದೇವೇಗೌಡ ಬಡಾವಣೆಯಲ್ಲಿ ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಬಡ ಕುಟುಂಬವೊಂದಕ್ಕೆ ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡಲಾದ ನೂತನ ಮನೆ "ರಹಮತ್" ಅನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬೆಳಪು ಸಿಎ ಬ್ಯಾಂಕ್ ಅಧ್ಯಕ್ಷ, ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳಪು ಗ್ರಾಮದಲ್ಲಿ 600ಕ್ಕೂ ಅಧಿಕ ಬಡಕುಟುಂಬಗಳಿಗೆ ಮನೆ ನಿವೇಶನ ಒದಗಿಸಲಾಗಿದ್ದು, ಮನೆ ನಿವೇಶನ ದೊರಕಿದರೂ, ಮನೆ ನಿರ್ಮಾಣಕ್ಕೆ ಕಷ್ಟ ಪಡುತ್ತಿದ್ದ ಕೆಲವರಿಗೆ ದಾನಿಗಳ ನೆರವಿನೊಂದಿಗೆ ಮನೆ ನಿರ್ಮಾಣದ ಸಂಕಲ್ಪ ಮಾಡಲಾಗಿದ್ದು, ಅದಕ್ಕೆ ಅನುಗುಣವಾಗಿ ಜಮಾಅತೆ ಇಸ್ಲಾಮೀ ಹಿಂದ್ ಸಹಿತ ನಾನಾ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ ಎಂದರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಕಾಪು ತಾಲೂಕು ಘಟಕದ ಅಧ್ಯಕ್ಷ ಶಬೀ ಅಹಮದ್ ಖಾಝಿ ಮಾತನಾಡಿ, ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ನಮ್ಮ ದಿನ ನಿತ್ಯದ ಉಳಿತಾಯದ ಒಂದಂಶವನ್ನು ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಒದಗಿಸಿದರೆ ಅದು ದೇವರಿಗೆ ಅತಿ ಪ್ರಿಯ ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ಗೋವಾದ ಉದ್ಯಮಿ ಇಸ್ಮಾಯಿಲ್ ಸಾಹೇಬ್ ನೂತನ ಮನೆಯ ಕೀಲಿ ಕೈ ಹಸ್ತಾಂತರಿಸಿದರು. ಕೊಂಬಗುಡ್ಡೆ ಜಾಮಿಯಾ ಮಸ್ಜಿದ್ ಜದೀದ್ ಕಲಾನ್‌ನ ಇಮಾಮ್ ಮೌಲಾನಾ ಮಹಮ್ಮದ್ ಪರ್ವೇಝ್ ಆಲಂ ನದ್ವಿ ಕುರ್ ಆನ್ ಪಠಣದೊಂದಿಗೆ ಮನೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು.
ಕಾಪು ಧರಣಿ ಸಮಾಜ ಸೇವಾ ಸಂಘದ ಅಧ್ಯಕ್ಷ ಲೀಲಾಧರ ಶೆಟ್ಟಿ ಕರಂದಾಡಿ, ಉದ್ಯಮಿ ಎಸ್. ಕೆ. ಇಕ್ಬಾಲ್ ಕಟಪಾಡಿ, ಕಾಪು ಮುಷ್ತಾಕ್ ಇಲೆಕ್ಟ್ರಿಕಲ್ಸ್‌ನ ಮಾಲಕ ಮುಷ್ತಾಕ್ ಇಬ್ರಾಹಿಂ, ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ಸ್ಥಾಯಿ ಅಧ್ಯಕ್ಷ ಡಾ. ಅಬ್ದುಲ್ ಅಜೀಜ್, ಇಕ್ಬಾಲ್ ಸಾಹೇಬ್ ಮಜೂರು ಅತಿಥಿಗಳಾಗಿದ್ದರು. ಜಮಾಅತೆ ಇಸ್ಲಾಮೀ ಹಿಂದ್‌ನ ಹೂಡೆ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಖಾದರ್, ಮಲ್ಪೆ ಸ್ಥಾನೀಯ ಅಧ್ಯಕ್ಷ ಅಬ್ದುಲ್ ರಹಮಾನ್ ರಫೀಕ್, ಹೆಚ್.ಆರ್.ಎಸ್. ಜಿಲ್ಲಾ ಸಂಚಾಲಕ ಹಸನ್ ಮೊದಲಾದವರು ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮೀ ಹಿಂದ್‌ನ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಹಮ್ಮದ್ ಇಕ್ಬಾಲ್ ಆದಂ ಮಜೂರು ವಂದಿಸಿದರು. ನಿಸಾರ್ ಅಹಮದ್ ಕಟಪಾಡಿ ನಿರೂಪಿಸಿದರು.
Kshetra Samachara
10/12/2020 08:27 pm