ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯವಿರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಿದ್ಧಗೊಂಡಿರುವ ಈ ಲಸಿಕಾ ಸಂಗ್ರಹ ಕೊಠಡಿ ಯಲ್ಲಿ ಸುಮಾರು 2.28 ಕೋಟಿ ಡೋಸ್ ಲಸಿಕೆ ಸಂಗ್ರಹಿಸಿಡುವ ಸಾಮರ್ಥ್ಯವಿದ್ದು, ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ.
ವಿಶ್ವಾದ್ಯಂತ 248 ಕ್ಕೂ ಅಧಿಕ ಲಸಿಕೆ ತಯಾರಿಕಾ ಕಂಪೆನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ 197 ಲಸಿಕೆಗಳು ಪ್ರೀ ಕ್ಲಿನಿಕಲ್, 23 ಲಸಿಕೆಗಳು ಪೇಸ್ 1, 16 ಲಸಿಕೆಗಳು ಫೇಸ್ 1/2, 2 ಲಸಿಕೆಗಳು ಫೇಸ್ 2, 10 ಲಸಿಕೆಗಳು ಫೇಸ್ 3 ರಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಇದುವರೆಗೆ ಯಾವುದೇ ಲಸಿಕೆಗಳಿಗೆ ಅನುಮತಿ ದೊರೆತಿಲ್ಲ. ಆದರೆ, ಶೀಘ್ರ ಅನುಮತಿ ದೊರೆಯುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ನರ್ಸ್ ಗಳು, ಲ್ಯಾಬ್ ಟೆಕ್ನೀಷಿಯನ್‌ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ಡೇಟಾಬೇಸ್ ಶೀಘ್ರದಲ್ಲಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಈಗಾಗಲೇ ಸೂಚನೆ ನೀಡಿದ್ದಾರೆ.
ಕೋವಿಡ್ ಲಸಿಕೆ ತಯಾರಿಕೆ ಘಟಕದಿಂದ ಆರಂಭಗೊಂಡು, ಸಂಚಾರ ವ್ಯವಸ್ಥೆ, ಲಸಿಕಾ ಸಂಗ್ರಹ ಕೊಠಡಿಯಲ್ಲಿ ಶೇಖರಣೆ ಮತ್ತು ಲಸಿಕೆ ವಿತರಣೆ ಸ್ಥಳಕ್ಕೆ ತಲುಪುವವರೆಗೆ ಲಸಿಕೆಗೆ ಅಗತ್ಯವಿರುವ 2 ರಿಂದ 8 ಡಿಗ್ರಿ ವರೆಗಿನ ತಾಪಮಾನ ಕಾಪಾಡುವ ಅಗತ್ಯವಿದ್ದು, ಯಾವುದೇ ಸಂದರ್ಭ ಲಸಿಕೆಯ ತಾಪಮಾನ ವ್ಯತ್ಯಯವಾಗದಂತೆ ನಿಗಾ ವಹಿಸಲು ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 77 ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಿದ್ದು, ಈ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ಸಾಗಾಟಕ್ಕೆ 1324 ವಾಹನಗಳು, 9370 ಐಸ್ ಪ್ಯಾಕ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಲಸಿಕೆ ನೀಡಲು ನುರಿತ ಸಿಬ್ಬಂದಿಯನ್ನೂ ಸಹ ಗುರುತಿಸಲಾಗಿದೆ.
Kshetra Samachara
06/11/2020 07:11 pm