ಉಡುಪಿ: ಅಪಘಾತಕ್ಕೀಡಾದ ಯುವಕನಿಗೆ ಮಂಗಳೂರಿನ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗಿದ್ದು , ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಸೂಕ್ತ ವ್ಯವಸ್ಥೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ. ಕೋಟ ಠಾಣೆ ವ್ಯಾಪ್ತಿಯಲ್ಲಿ ಒಡಿಶಾ ಮೂಲದ ಯುವಕನೊಬ್ಬ ಭಾನುವಾರ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ. ಸೂಕ್ತ ಚಿಕಿತ್ಸೆ ನೀಡಿ ಯುವಕನ ಪ್ರಾಣ ಉಳಿಸಬೇಕಾದ ವೆನ್ಲಾಕ್ ಆಸ್ಪತ್ರೆ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿಸಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರ ಸಕಾಲಿಕ ಹಾಗೂ ಮಾನವೀಯ ನೆರವಿನಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಪಘಾತದಂತಹ ಗಂಭೀರ ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಬೇಕಾದ ಸರಕಾರಿ ವ್ಯವಸ್ಥೆ, ದುರಸ್ತಿಯಲ್ಲಿದೆ ಎಂಬ ಕಾರಣ ನೀಡಿ ರೋಗಿಗಳನ್ನು ಹಿಂದಕ್ಕೆ ಕಳುಹಿಸಿ ಅವರ ಪ್ರಾಣದೊಡನೆ ಚೆಲ್ಲಾಟ ಮಾಡುತ್ತಿರುವುದು ಖಂಡನೀಯ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಡಿಶಾ ಮೂಲದ ಕೂಲಿ ಕಾರ್ಮಿಕ ಕೃಷ್ಣ (27 ) ಎಂಬ ಯುವಕನಿಗೆ ಬೈಕೊಂದು ಡಿಕ್ಕಿ ಹೊಡೆದು ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಆಂತರಿಕ ಘಾಸಿಯಾಗಿತ್ತು.
ಯುವಕನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಅಪಘಾತದ ಗಂಭೀರತೆ ಹಾಗೂ ಯುವಕನ ಆರ್ಥಿಕ ಪರಿಸ್ಥಿತಿಯನ್ನು ಅರಿತ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಆಂಬುಲೆನ್ಸ್ ಮೂಲಕ ರೋಗಿಯನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಅಲ್ಲಿ ಹೊಟ್ಟೆಗಾದ ಗಂಭೀರ ಏಟಿನಿಂದ ರೋಗಿ ನರಳುತ್ತಿದ್ದರೂ ಗಮನಿಸದೆ ಶಸ್ತ್ರ ಚಿಕಿತ್ಸಾ ವಿಭಾಗ ದುರಸ್ತಿಯಲ್ಲಿದೆ ಎಂದು ಹೇಳಿ ರೋಗಿಯನ್ನು ದಾಖಲಿಸಿಕೊಳ್ಳದೆ ಹಿಂದಕ್ಕೆ ಕಳುಹಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.
ಬ್ರಹ್ಮಾವರ ದಿಂದ ವೆನ್ಲಾಕ್ಗೆಗೆ ಪ್ರಯಾಣಿಸಲು ಒಂದೂವರೆ ಗಂಟೆ ಹಾಗೂ ಅಲ್ಲಿಂದ ಉಡುಪಿಗೆ ವಾಪಾಸ್ ಬರಲು ಒಂದೂವರೆ ಗಂಟೆ ಹೀಗೆ ಯುವಕನ ಪ್ರಾಣ ಉಳಿಸುವ ಅಮೂಲ್ಯ ಸಮಯ ಪೋಲಾಗಿದೆ. ವೆನ್ಲಾಕ್ನಿಂದ ಉಡುಪಿಗೆ ವಾಪಸ್ ಆದ ರೋಗಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗುತ್ತಿದ್ದಂತೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿ ಅವರು ಯುವಕನ ನೆರವಿಗೆ ಧಾವಿಸಿದ್ದಾರೆ. ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರ ಚಿಕಿತ್ಸೆ ದೊರೆಯುವಂತೆ ತಾನೇ ಮುತುವರ್ಜಿ ವಹಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.ಇದೀಗ ಯುವಕನನ್ನು ಶಸ್ತ್ರ ಚಿಕಿತ್ಸೆ ನಡೆಸಿ ಐಸಿಯುನಲ್ಲಿ ಇರಿಸಲಾಗಿದ್ದು , ರೋಗಿಯ ಸ್ಥಿತಿ ಗಂಭೀರವಾಗಿದೆ.
Kshetra Samachara
02/12/2024 03:44 pm