ಉಡುಪಿ: ಜನರಲ್ಲಿ ತಿಳುವಳಿಕೆ ಮೂಡಿಸಲು ಕಾಯಕ ಶರಣರಂತಹ ಮಹನೀಯರ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಆಚರಣೆಯಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಪ್ಪಾರ್ಚನೆಗೈದು ಮಾತನಾಡುತ್ತಾ 12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪವು ಕ್ರಾಂತಿಯನ್ನು ಉಂಟುಮಾಡಿತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬ ಬಸವೇಶ್ವರ ತತ್ವ ಸಿದ್ದಾಂತದಂತೆ ಅವರ ಹಾದಿಯಲ್ಲಿ ಕಾಯಕ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಮೊದಲಾದ ಮಹನೀಯರಿದ್ದಾರೆ. ಇವರೆಲ್ಲಾ ವೃತ್ತಿಯನ್ನು ಗೌರವದಿಂದ ನಡೆಸಿ, ತಮ್ಮ ವಚನಗಳ ಮೂಲಕ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಇವರ ಪ್ರತಿಭೆಯು ಶ್ಲಾಘನೀಯವಾದುದು ಎಂದರು.
ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರು ಹಾಗೂ ಜಾನಪದ ಕಲಾವಿದರಾದ ವಾಸುದೇವ ಬನ್ನಂಜೆಯವರು ಮಾತನಾಡಿ ಶರಣರ ವಚನಗಳನ್ನು ಪಾಲಿಸಿದರೆ ಸಮಾಜದಲ್ಲಿ ಸಾಮಾಜಿಕ ಬದಲಾವಣೆ ಸಾಧ್ಯ. ಇವರ ಸಿದ್ದಾಂತಗಳು ದಾರಿದೀಪ ಎಂದು ಬಣ್ಣಿಸಿದರು. ಸಂಗೀತ ಕಲಾವಿದರಾದ ಅರುಣ್ ಕುಮಾರ್ ಹಾವಂಜೆ, ಸಂತೋಷ್ ಪಾಣ ಹಾವಂಜೆ, ಶ್ರೀನಿವಾಸ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಶ್ಫಕ್, ಸದಾನಂದ, ಕೃಷ್ಣ, ದೀಕ್ಷಿತ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ ವಂದಿಸಿದರು.
Kshetra Samachara
01/03/2022 06:03 pm