ವರದಿ: ಶಫೀ ಉಚ್ಚಿಲ
ಕಟಪಾಡಿ: ಹಿಂದೆ ಕೃಷಿ ಪ್ರಧಾನ ತುಳುನಾಡಿನಲ್ಲಿ ಜಾನುವಾರುಗಳನ್ನು ಗುಡ್ಡ-ಲಚ್ಚಿಲ್ ಪ್ರದೇಶಗಳಿಗೆ ಮೇಯಲು ಕೊಂಡೊಯ್ಯುತ್ತಿದ್ದ ಕಾಲ. ಜಾನುವಾರುಗಳನ್ನು ಕಾಯುತ್ತಿದ್ದ ಮಕ್ಕಳು ಮುಳ್ಳು-ಕಸಕಡ್ಡಿ ಒಂದು ಕಡೆ ಶೇಖರಿಸಿ ಇಡುವುದು ರೂಢಿಯಲ್ಲಿತ್ತು. ಹಾಗೆ ಶೇಖರಿಸಿ ಇಟ್ಟ ರಾಶಿಗೆ ದೀಪಾವಳಿಯಂದು ಪ್ರಾತಃಕಾಲದಲ್ಲಿ ಊರವರು ಸೇರಿ ಸಾಮೂಹಿಕವಾಗಿ ಬೆಂಕಿ ಹಚ್ಚಿ ಸುಡುವಂತಹ ಒಂದು ಆಚರಣೆ ಕೆಲವೇ ಕಡೆ ಇಂದಿಗೂ ಚಾಲ್ತಿಯಲ್ಲಿದೆ.
ಸಾಂಪ್ರದಾಯಿಕವಾಗಿ ನಡೆಸಲಾಗುವ ಈ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಬಗ್ಗೆ ಮಾತನಾಡಿದ ಸಾಹಿತಿ ಕಟಪಾಡಿ ಶಂಕರ ಪೂಜಾರಿ, ತುಳುನಾಡಿನ ಇಂತಹ ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆ ನಶಿಸಿ ಹೋಗಬಾರದು. ಇದನ್ನು ಉಳಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದರು.
ಅವರು ಏಣಗುಡ್ಡೆಯ ದೇವಸ್ಥಾನದ ವಠಾರದಲ್ಲಿ ಜರುಗಿದ ಮುಳ್ಳಮುಟ್ಟೆ ಸುಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಸ್ಥಾನದ ಮುಖ್ಯಸ್ಥ ಆನಂದ ಮಾಬಿಯಾನ್, ಊರಿನ ಗುರಿಕಾರರಾದ ದಾಮೋದರ ಕೆ.ಪೂಜಾರಿ, ಸೂರಪ್ಪ ಕುಂದರ್, ವಿನೋಧರ ಪೂಜಾರಿ, ನಾರಾಯಣ ಮದಿಪು, ಹರಿದಾಸ ಶ್ರೀಯಾನ್, ಗಣೇಶ ಮಿತ್ತೋಟ್ಟು, ರಾಜೇಂದ್ರ ಆಚಾರ್ಯ, ಸಿದ್ಧಾಂತ್ ಎ.ಮಾಬಿಯಾನ್ ಉಪಸ್ಥಿತರಿದ್ದರು. ರಮೇಶ್ ಕೋಟ್ಯಾನ್, ಕೃಷ್ಣ ಪೂಜಾರಿ ಪೂಜಾವಿಧಿ ನೆರವೇರಿಸಿದರು.
Kshetra Samachara
16/11/2020 09:03 am