ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಪತ್ಪಾಂಧವ ಆರಕ್ಷಕನ ಮರೆಯದ ಹಿರಿಯ ಜೀವ: ಮೊಮ್ಮಗನ ಮದುವೆ ಮಂಟಪದಲ್ಲೇ ಸನ್ಮಾನ

ಕಾಪು: ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದಾಗ, ತನ್ನೊಂದಿಗೆ ಆಸ್ಪತ್ರೆಯಲ್ಲಿದ್ದ ಅಜ್ಜಿಯನ್ನೂ ಪ್ರೀತಿಯಿಂದ ಆರೈಕೆ ಮಾಡಿ, ಮಾನಸಿಕ ಸ್ಥೈರ್ಯ ತುಂಬಿದ ಕಾಪು ಪೊಲೀಸ್ ಠಾಣಾ ಹೆಡ್ ಕಾನ್‌ಸ್ಟೇಬಲ್ ಸುಧಾಕರ ಭಂಡಾರಿ ಅವರನ್ನು ಸ್ವತಃ ಅಜ್ಜಿಯೇ ಕರೆದು, ಮೊಮ್ಮಗನ ಮದುವೆ ಮಂಟಪದಲ್ಲಿ ಸನ್ಮಾನಿಸಿದ ಅಪರೂಪದ ಘಟನೆ ಅ.30ರಂದು ನಡೆದಿದೆ.

ಹೆಡ್ ಕಾನ್ಸ್‌ಟೇಬಲ್ ಸುಧಾಕರ ಭಂಡಾರಿ ಕೋವಿಡ್ ಪಾಸಿಟಿವ್ ಬಂದು ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಸಂದರ್ಭದಲ್ಲಿ ಸಾಸ್ತಾನದ ಎಡಬೆಟ್ಟು ಚೇಂಪಿಯ ನಿವಾಸಿ, ನಿವೃತ್ತ ಗ್ರಾಮ ಕರಣಿಕ ಜನಾರ್ದನ ಆಚಾರ್ಯ ಮತ್ತವರ ಮನೆಯವರೂ ಅದೇ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಹೀಗೆ ದಾಖಲಾಗಿದ್ದ ಕುಟುಂಬ ಸದಸ್ಯರೆಲ್ಲ ಗುಣಮುಖರಾಗಿ ಮನೆಗೆ ತೆರಳಿದ್ದು, ಜನಾರ್ದನ ಆಚಾರ್ಯ ಅವರ ತಾಯಿ 87 ವರ್ಷದ ಜಾನಕಿ ಆಚಾರ್ಯ ಅವರು ಮತ್ತೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯುವ ಅನಿವಾರ್ಯತೆಗೆ ಸಿಲುಕಿದ್ದರು. ಮನೆಯವರಿಗೆ ಅತ್ತ ಮನೆಗೂ ಹೋಗಲಾಗದೆ, ತಾಯಿಯೊಂದಿಗೆ ಕುಳಿತುಕೊಳ್ಳಲೂ ಆಗದ ಸ್ಥಿತಿ ಎದುರಾದಾಗ ಪೊಲೀಸ್ ಸುಧಾಕರ್ ಅವರು ಜಾನಕಿ ಆಚಾರ್ಯ ಅವರಿಗೆ ನೆರವಿಗೆ ಧಾವಿಸಿದ್ದರು.

ಆಸ್ಪತ್ರೆಯಲ್ಲಿ ಇರುವಷ್ಟು ದಿನಗಳ ಕಾಲ ಸುಧಾಕರ್ ಅವರು, ಜಾನಕಿ ಅವರನ್ನು ನೋಡಿಕೊಂಡಿದ್ದು, ಮನೆಯವರ ಒಡನಾಟವಿಲ್ಲದೆ ಮಾನಸಿಕವಾಗಿ ನೊಂದಿದ್ದ ಅಜ್ಜಿಗೆ ಧೈರ್ಯ ತುಂಬಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಸ್ವತಃ ಸುಧಾಕರ್ ಅವರೇ ಜಾನಕಿ ಆಚಾರ್ಯ ಅವರನ್ನು ಆಸ್ಪತ್ರೆಯ ನಾಲ್ಕು ಮಹಡಿಯ ಮೇಲಿನ ಕೋಣೆಯಿಂದ ಕೆಳಗಿನವರೆಗೆ ತಂದು ಬಿಟ್ಟು, ಮನೆಯವರಿಗೆ ಒಪ್ಪಿಸಿದ್ದರು. ಪೊಲೀಸ್ ಸಿಬಂದಿಯ ಸೇವೆಯು ಅಜ್ಜಿ ಮತ್ತು ಅಜ್ಜಿಯ ಮನೆಯವರ ಮೆಚ್ಚುಗೆಗೆ ಪಾತ್ರವಾಗಿತ್ತು.

ಎಂಟು ಮಕ್ಕಳ ತುಂಬು ಸಂಸಾರವನ್ನು ಹೊಂದಿರುವ ಜಾನಕಿ ಆಚಾರ್ಯ ಅವರು ಕಷ್ಟ ಕಾಲದಲ್ಲಿ ತನ್ನ ನೆರವಿಗೆ ಧಾವಿಸಿದ್ದ ಪೊಲೀಸ್ ಸಿಬಂದಿಯ ಸೇವೆ ಗಮನದಲ್ಲಿರಿಸಿಕೊಂಡಿದ್ದು ಸುಧಾಕರ್ ಅವರನ್ನು ಮಗನೆಂದೇ ಕರೆಯಲಾರಂಭಿಸಿದ್ದರು. ಅದೇ ಪ್ರೀತಿಯಿಂದ ಅಜ್ಜಿ, ಸುಧಾಕರ್ ಭಂಡಾರಿ ಅವರಿಗೆ ಸ್ವತಃ ದೂರವಾಣಿ ಕರೆ ಮಾಡಿ, ತನ್ನ ಮೊಮ್ಮಗನ ಮದುವೆಗೆ ಆಮಂತ್ರಿಸಿದ್ದರು.

ಅಜ್ಜಿಯ ವಾತ್ಸಲ್ಯ, ಪ್ರೀತಿಯ ಕರೆಗೆ ಓಗೊಟ್ಟು ಮದುವೆಗೆ ತೆರಳಿದ ಸುಧಾಕರ್ ಭಂಡಾರಿ ಅವರನ್ನು ಎಲ್ಲರಿಗೆ ಪರಿಚಯಿಸಿಕೊಟ್ಟು ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

31/10/2020 12:10 pm

Cinque Terre

17.02 K

Cinque Terre

6

ಸಂಬಂಧಿತ ಸುದ್ದಿ