ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿ ಎರಡು ಕಡೆಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ದಾಳಿ ನಡೆಸಿ 3 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಕುಂದಾಪುರ ತಾಲೂಕು ತ್ರಾಸಿ, ಮೊವಾಡಿ ಗ್ರಾಮ ಹಾಗೂ ಬೈಂದೂರು ತಾಲೂಕಿನ ಮರವಂತೆ ಹಾಗೂ ಬಡಾಕೆರೆ ಗ್ರಾಮ ವ್ಯಾಪ್ತಿಯಲ್ಲಿ ಸೌಪರ್ಣಿಕಾ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಟ ನಡೆಸಲಾಗುತ್ತಿತ್ತು.
ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಇಲಾಖೆ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಆನಗೋಡು ಎಂಬಲ್ಲಿ ದಾಳಿ ನಡೆಸಿ ಮರಳು ತುಂಬಲು ದಕ್ಕೆಯಲ್ಲಿ ನಿಂತಿದ್ದ ಒಂದು ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ನೂಂದು ಪ್ರಕರಣದಲ್ಲಿ ಕುಂದಾಪುರ ತಾಲೂಕು ತ್ರಾಸಿ ಗ್ರಾಮ ವ್ಯಾಪ್ತಿಯ ಅರಮ ದೇವಸ್ಥಾನದ ಹತ್ತಿರದ ಅನಧಿಕೃತ ಮರಳು ಗಣಿಗಾರಿಕೆ ದಕ್ಕೆಗೆ ದಾಳಿ ನಡೆಸಿ ಮರಳು ತುಂಬಲು ದಕ್ಕೆಯಲ್ಲಿ ನಿಂತಿದ್ದ 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Kshetra Samachara
21/09/2022 06:13 pm