ಕುಂದಾಪುರ: ಅಪ್ರಾಪ್ತ ಬಾಲಕರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರೋಪಿ ಚಂದ್ರ ಕೆ. ಹೆಮ್ಮಾಡಿ ದೋಷಿಯೆಂದು ಉಡುಪಿ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಒಂದನೇ ಪ್ರಕರಣದಲ್ಲಿ ಸಂತ್ರಸ್ತ 15 ವರ್ಷದ ಬಾಲಕನನ್ನು ಶಾಲೆಯಲ್ಲಿ ಹಾಡುಗಾರನೆಂಬಂತೆ ಪರಿಚಯಿಸಿಕೊಂಡ ಆರೋಪಿ ಬಾಲಕ ಶಾಲಾ ಆಟದ ಮೈದಾನದಲ್ಲಿರುವಾಗ ಬೈಕ್ ಸವಾರಿ ಮಾಡಿಸುವ ನೆಪದಲ್ಲಿ ಆತನನ್ನು ಶೌಚಾಲಯದೊಳಕ್ಕೆ ಕರೆಯಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ. 23 ಸಾಕ್ಷ್ಯಾಧಾರಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದ್ದು ನೊಂದ ಬಾಲಕ ನುಡಿದ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಚಂದ್ರ ಕೆ. ಹೆಮ್ಮಾಡಿ ಅಪರಾಧಿಯೆಂದು ತೀರ್ಪು ನೀಡಿದ ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ ನೊಂದ ಬಾಲಕನಿಗೆ 25 ಸಾವಿರ ದಂಡ ನೀಡಲು ಆದೇಶಿಸಿದೆ.
ಮತ್ತೊಂದು ಪ್ರಕರಣವೂ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಚಂದ್ರ ಕೆ. ಹೆಮ್ಮಾಡಿ 13 ವರ್ಷದ ಸಂತ್ರಸ್ತ ಬಾಲಕನನ್ನು ಪರಿಚಯಿಸಿಕೊಂಡು ಗುಹೆ ಫೋಟೋ ತೆಗೆಯಲು ಹೋಗುವುದಿದೆ ಎಂದು ಸ್ನೇಹಿತನೊಂದಿಗೆ ಬೈಕಿನಲ್ಲಿ ಕರೆದೊಯ್ದು ಸ್ನೇಹಿತನಿಗೆ ಆಟವಾಡಲು ಮೊಬೈಲ್ ನೀಡಿ ಬಾಲಕನನ್ನು ಗುಹೆಯೊಳಗೆ ಕರೆದೊಯ್ದು ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ಆರೋಪದಡಿ ಪ್ರಕರಣ ದಾಖಲಾಗಿತ್ತು. 22 ಸಾಕ್ಷಿದಾರರ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ನೊಂದ ಬಾಲಕನ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳು ಅಭಿಯೋಜನೆಗೆ ಪೂರಕವಾಗಿದ್ದು ಅಪರಾಧಿಗೆ 5 ವರ್ಷ ಕಠಿಣ ಸಜೆ ವಿಧಿಸಿದ್ದು ಹಾಗೂ ನೊಂದ ಬಾಲಕನಿಗೆ 25 ಸಾವಿರ ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.
ಈ ಎರಡು ಪ್ರತ್ಯೇಕ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಅಂದಿನ ಬೈಂದೂರು ಸಿಪಿಐ ಪರಮೇಶ್ವರ ಆರ್. ಗುನಗ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
Kshetra Samachara
01/04/2022 09:00 am