ಉಡುಪಿ : ಇತ್ತೀಚೆಗೆ ಗೋ ಮಾಂಸ ದಂಧೆ ಉಡುಪಿ ಜಿಲ್ಲೆಯಾದ್ಯಂತ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದ್ದಂತೆಯೇ ಎಗ್ಗಿಲ್ಲದೆ ಮತ್ತೆ ಗೋಮಾಂಸ ಮಾರಾಟ ನಡೆಯುತ್ತಿದೆ.
ಇದೀಗ ಮನೆ-ಮನೆಗೆ ಗೋಮಾಂಸ ಮಾರುತ್ತಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನು ಮಾರ್ಕೆಟ್ ಸಮೀಪ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಅಬ್ದುಲ್ ರಹೀಂ (30) ಬಂಧಿತ ಆರೋಪಿ.
ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಅವರು ಹೆಡ್ ಕಾನ್ ಸ್ಟೇಬಲ್ ಗಿರೀಶ್ ಅವರೊಂದಿಗೆ ಗಂಗೊಳ್ಳಿ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಗೊಳ್ಳಿ ಮೀನು ಮಾರ್ಕೆಟ್ ಸಮೀಪ ಅಬ್ದುಲ್ ರಹೀಂ ಎಂಬಾತ ದನದ ಮಾಂಸವನ್ನು ಮನೆ- ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಅಕ್ರಮವಾಗಿ 4 ಕೆ.ಜಿ. ದನದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಆರೋಪಿ ಸಹಿತ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Kshetra Samachara
28/12/2020 03:53 pm