ತುಮಕೂರು: ಗೃಹ ಸಚಿವರ ತವರಲ್ಲಿ ಕಾನೂನು ಸುವ್ಯವಸ್ತೆ ಹಳ್ಳ ಹಿಡಿದಿದೆ. ತುಮಕೂರು ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ಅಪರಾಧ ಪ್ರಕರಣ ಮಟ್ಟ ಹಾಕುವಲ್ಲಿ ವಿಫಲವಾಗಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಮನೆಯಲ್ಲಿ ಊಟ ಮಾಡುತ್ತಿದ್ದ ಯುವಕನನ್ನು ಹೊರಗೆ ಕರೆದು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮರಳೂರು ದಿಣ್ಣೆ 6ನೇ ಕ್ರಾಸ್‌ನಲ್ಲಿ ನಡೆದಿದೆ. ರಿಹಾನ್ ಕೊಲೆಯಾದ ಯುವಕನಾಗಿದ್ದು, ಈ ಘಟನೆ ತುಮಕೂರು ಜನತೆಯನ್ನು ಬೆಚ್ಚಿ ಬೀಳಿಸಿದೆ.
ಮರಳೂರು ದಿಣ್ಣೆಯಲ್ಲಿ ವಾಸವಿರುವ ರಿಹಾನ್ ಎಂಬಾತನನ್ನು ಅದೇ ಏರಿಯಾದಲ್ಲಿ ವಾಸವಿರುವ ಸಾಧಿಕ್ ಅಬ್ಬಾಸ್ ಸೇರಿದಂತೆ ನಾಲ್ವರು ಯುವಕರು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಿಹಾನ್‌ನನ್ನು ಸ್ಥಳೀಯರು ಕೂಡಲೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರವಾನಿಸಲಾಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ಕೊಲೆ ಮಾಡಿರುವ ಆರೋಪಿಗಳು ಗಾಂಜಾ, ಸೊಲ್ಯೂಷನ್ ಚಟಕ್ಕೆ ಮಾರು ಹೋಗಿದ್ದರು. ಕಳೆದ ಒಂದು ವರ್ಷದ ಹಿಂದೆಯೂ ಸಹ ರಿಹಾನ್‌ನ ಜೊತೆಗೆ ಸಾಧಿಕ್ ಗಲಾಟೆ ಮಾಡಿಕೊಂಡಿದ್ದ ಎಂದು ಮೃತನ ಪೋಷಕರು ತಿಳಿಸಿದ್ದಾರೆ.
ತುಮಕೂರು ನಗರದ ತಿಲಕ್ ಪಾರ್ಕ್ ಹಾಗೂ ಜಯನಗರ ಠಾಣಾ ವ್ಯಾಪ್ತಿಯಲ್ಲೇ ಈ ರೀತಿ ಅಹಿತಕರ ಘಟನೆ ನಡೆಯುತ್ತಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಧೀನ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾದ ಪರಿಣಾಮ ತುಮಕೂರಲ್ಲಿ ಅಪರಾಧ ಪ್ರಕರಣಗಳು ವೈಭವೀಕರಿಸುತ್ತಿವೆ ಎಂಬ ಆರೋಪಗಳೂ ಸಹ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಇನ್ನಾದರೂ ಎಚ್ಚೆತ್ತು ಜಡ್ಡುಗಟ್ಟಿರುವ ಪೊಲೀಸ್ ವ್ಯವಸ್ತೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಲಿ ಎಂದು ಪ್ರಜ್ಙಾವಂತ ಸಮುದಾಯದ ಆಗ್ರಹವಾಗಿದೆ.
PublicNext
16/11/2024 01:35 pm