ನವದೆಹಲಿ: ಕಳೆದ ವರ್ಷ ಯುಎಇನಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಪ್ರಧಾನ ಕೋಚ್ ಆಗಿ ನೇಮಕವಾದ ರಾಹುಲ್ ದ್ರಾವಿಡ್ ಅಡಿಯಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್ ಸರಣಿಗಳನ್ನು ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಸಮಬಲಗೊಂಡಿದೆ. ಈ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಮಾತ್ರ ಟೀಂ ಇಂಡಿಯಾ ಸೋಲನುಭವಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯ ಆರಂಭಕ್ಕೂ ಮುನ್ನ ತನ್ನ ಕೋಚಿಂಗ್ ಪ್ರಯಾಣದ ಬಗ್ಗೆ ಮಾತನಾಡಿದ ದ್ರಾವಿಡ್, “ಇದು ರೋಮಾಂಚಕ ಅನುಭವ. ಇದು ಸಂತಸವನ್ನೂ ನೀಡಿದೆ. ಆದರೆ ಇದೊಂದು ಸವಾಲಿನ ಪ್ರಯಾಣವಾಗಿದೆ. ಕಳೆದ ಎಂಟು ತಿಂಗಳಲ್ಲಿ ಬಹುಶಃ ಆರು ಕ್ಯಾಪ್ಟನ್‌ಗಳ ಜೊತೆ ನಾನು ಕೆಲಸ ಮಾಡಬೇಕಾಗಿತ್ತು. ಬಹುಶಃ ನಾನು ಮೊದಲು ಕೋಚ್ ಆಗಿ ಕೆಲಸ ಆರಂಭಿಸಿದಾಗ ಈ ಯೋಚನೆಯಿರಲಿಲ್ಲ. ಆದರೆ ಕೋವಿಡ್‌ನಿಂದ ಬದಲಾದ ಸನ್ನಿವೇಶಗಳು ಮತ್ತು ಹಲವು ಸರಣಿಗಳಿಂದಾಗಿ ಇದೆಲ್ಲ ಮಾಡಬೇಕಾಗುತ್ತದೆ” ಎಂದರು.
“ನೀವು ತಂಡವನ್ನು ಸಂಭಾಳಿಸಬೇಕಾಗುತ್ತದೆ, ಆಟಗಾರರ ಕೆಲಸದ ಹೊರೆಯ ಬಗ್ಗೆಯೂ ಯೋಚಿಸಬೇಕು. ಇದರ ನಡುವೆ ನಾಯಕತ್ವದಲ್ಲಿನ ಬದಲಾವಣೆಗಳು, ಹೊಸ ಆಟಗಾರರ ಸೇರ್ಪಡೆ. ಹೀಗೆ ಈ ಪ್ರಯಾಣದಲ್ಲಿ ಬಹಳಷ್ಟು ಸವಾಲುಗಳಿದ್ದವು” ಎಂದು ದ್ರಾವಿಡ್ ಹೇಳಿದರು.
PublicNext
20/06/2022 01:22 pm