ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 37 ರನ್‌ಗಳಿಂದ ಗೆದ್ದು ಬೀಗಿದೆ.
ಮುಂಬೈನ ಡಿ.ವೈ. ಪಾಟೀಲ ಸ್ಟೇಡಿಯಂನಲ್ಲಿ ಐಪಿಎಲ್ 15ನೇ ಆವೃತ್ತಿಯ ಭಾಗವಾಗಿ ಇಂದು ನಡೆದ 24ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 4 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು.
193 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸೋಲು ಕಂಡಿದೆ. ತಂಡದ ಪರ ಜೋಶ್ ಬಟ್ಲರ್ 24 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸ್ ಸೇರಿ 54 ರನ್ ಚಚ್ಚಿದರು. ಶಿಮ್ರಾನ್ ಹೆಟ್ಮೇಯರ್ 29 ರನ್ ರನ್ ಗಳಿಸಿದರೆ, ನಾಯಕ ಸಂಜು ಸ್ಯಾಮ್ಸನ್ (11 ರನ್), ದೇವದತ್ ಪಡಿಕ್ಕಲ್ (0 ರನ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (6 ರನ್) ಹಾಗೂ ರಿಯಾನ್ ಪರಾಗ್ (18 ರನ್) ಬ್ಯಾಟಿಂಗ್ ವೈಫಲ್ಯ ತೋರಿದರು.
ಇದಕ್ಕೂ ಮುನ್ನ ಗುಜರಾತ್ ಪರ ನಾಯಕ ಹಾರ್ದಿಕ್ ಪಾಂಡ್ಯ 87 ರನ್ (52 ಎಸೆತ), ಅಭಿನವ್ ಮನೋಹರ್ 43 ರನ್ (28 ಎಸೆತ) ಹಾಗೂ ಡೇವಿಡ್ ಮಿಲ್ಲರ್ 31 ರನ್ (14 ಎಸೆತ) ಚಚ್ಚಿದ್ದರು. ಇನ್ನು ರಾಜಸ್ಥಾನ್ ರಾಯಲ್ಸ್ ಪರ ಕುಲದೀಪ್ ಸೇನ್, ಯಜುವೇಂದ್ರ ಚಾಹಲ್ ಹಾಗೂ ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದರು.
PublicNext
14/04/2022 11:30 pm