ನವದೆಹಲಿ: ಮುಂಬರುವ 2022ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದ ಜವಾಬ್ದಾರಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ಹೆಗಲಿಗೆ ಬಿದ್ದಿದೆ.
ಈ ಬಗ್ಗೆ ಮಾತನಾಡಿದ ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ, "ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿ 2018ರಿಂದ ಆಡುತ್ತಿದ್ದಾರೆ. ಕಳೆದ ಎರಡು ಆವೃತ್ತಿಗಳಿಂದ ಅವರು ನಾಯಕತ್ವದ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಮೆಗಾ ಹರಾಜಿನಲ್ಲಿ ಹೊಸ ತಂಡವನ್ನು ಕಟ್ಟಲಾಗಿದೆ. ಇದರಲ್ಲಿ ಅನುಭವಿ ಹಾಗೂ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ" ಎಂದು ಹೇಳಿದ್ದಾರೆ.
ಕಳೆದ 2020 ಮತ್ತು 2021ರ ಟೂರ್ನಿಗಳಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಹದಿನಾಲ್ಕನೇ ಆವೃತ್ತಿಯ ಬಳಿಕ ಅವರನ್ನು ಉಳಿಸಿಕೊಳ್ಳಲು ಪಂಜಾಬ್ ತಂಡ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ ಅವರು ಹರಾಜಿಗೆ ಬಿಡುಗಡೆಯಾಗುವ ಮೂಲಕ ಇದೀಗ ಲಕ್ನೋ ಸೂಪರ್ ಜೆಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಹಾಗೂ ತಂಡವನ್ನು ಮುನ್ನಡೆಸಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಮಯಾಂಕ್ ಅಗರ್ವಾಲ್, ಅರ್ಷದೀಪ್ ಸಿಂಗ್, ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೈರ್‌ಸ್ಟೋವ್, ರಾಹುಲ್ ಚಹರ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಪ್ರಭಸಿಮ್ರನ್ ಸಿಂಗ್, ಜಿತೇಶ್ ಶರ್ಮಾ, ಇಶಾನ್ ಪೊರೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಓಡಿಯನ್ ಸ್ಮಿತ್, ಸಂದೀಪ್ ಶರ್ಮಾ, ರಾಜ್ ಅಂಗದ್ ಬಾವಾ, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ, ರಿತಿಕ್ ಚಟರ್ಜಿ, ಬಲ್ತೇಜ್ ಧಂಡಾ, ಅನ್ಶ್ ಪಟೇಲ್, ನಾಥನ್ ಎಲ್ಲಿಸ್, ಅಥರ್ವ ತಾಯ್ದೆ, ಭಾನುಕಾ ರಾಜಪಕ್ಸ, ಬೆನ್ನಿ ಹೋವೆಲ್.
PublicNext
28/02/2022 02:54 pm