ಅಬುಧಾಬಿ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಅರ್ಧಶತಕ, ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡವು ಅಫ್ಘಾನಿಸ್ತಾನದ ವಿರುದ್ಧ 66 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಅಬುಧಾಬಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ 33ನೇ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ನಾಯಕ ಮೊಹಮ್ಮದ್ ನಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 2 ವಿಕೆಟ್ ನಷ್ಟಕ್ಕೆ 210 ರನ್‌ಗಳನ್ನು ಸಿಡಿಸಿತ್ತು.
ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಅಫ್ಘಾನ್ 7 ವಿಕೆಟ್ ನಷ್ಟಕ್ಕೆ 144 ರನ್ ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಪರ ನಾಯಕ ಮೊಹಮ್ಮದ್ ನಬಿ 35 ರನ್ ಹಾಗೂ ಕರೀಮ್ ಜನತ್ 42 ರನ್ ಗಳಿಸಿದರು.
ಆರಂಭಿಕ ಬ್ಯಾಟರ್ ಗಳಾದ ಹಜರತುಲ್ಲಾ ಝಜೈ (13 ರನ್) ಮೊಹಮ್ಮದ್ ಶಹಜಾದ್ (0 ರನ್), ರಹಮಾನುಲ್ಲಾ ಗುರ್ಬಾಜ್ (19 ರನ್), ಗುಲ್ಬದಿನ್ ನೈಬ್ 18 ರನ್, ನಜಿಬುಲ್ಲಾ ಝದ್ರಾನ್ (11 ರನ್) ಬಹುಬೇಗ ವಿಕೆಟ್ ಕೈ ಚೆಲ್ಲಿದರು.
ಇನ್ನು ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದರೆ, ಆರ್. ಅಶ್ವಿನ್ ರನ್ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಅಶ್ವಿನ್ 4 ಓವರ್ ಬೌಲಿಂಗ್ ಮಾಡಿ 2 ವಿಕೆಟ್ ಪಡೆದು ಕೇವಲ 14 ರನ್ ನೀಡಿದರು. ಉಳಿದಂತೆ ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ ತಲಾ ಒಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಗಳಾದ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಜೋಡಿಯು ಮೊದಲ ವಿಕೆಟ್ 140 ರನ್ ದಾಖಲಿಸಿತ್ತು. ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 47 ಎಸೆತಗಳಲ್ಲಿ 74 ರನ್ (8 ಬೌಂಡರಿ, 3 ಸಿಕ್ಸ್) ಸಿಡಿಸಿದ್ದರು.
ಇನ್ನು ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕಿದ್ದ ನಾಯಕ ವಿರಾಟ್ ಕೊಹ್ಲಿ ರಿಷಭ್ ಪಂತ್ ಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಉತ್ತಮ ಫಾರ್ಮ್ ನಲ್ಲಿದ್ದ ಕೆ.ಎಲ್. ರಾಹುಲ್ 69 ರನ್ (48 ಎಸೆತ, 6 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದ್ದರು. ಈಗಲೂ ವಿರಾಟ್ ಮೈದಾನಕ್ಕೆ ಇಳಿಯದೇ ಹಾರ್ದಿಕ್ ಪಾಂಡ್ಯ ಅವರಿಗೆ ಬ್ಯಾಟಿಂಗ್ ಅವಕಾಶ ಕಲ್ಪಿಸಿದ್ದರು.
ಇದರೊಂದಿಗೆ ಉತ್ತಮ ಅವಕಾಶ ಪಡೆದುಕೊಂಡ ರಿಷಭ್ ಪಂತ್13 ಎಸೆತಗಳಲ್ಲಿ ಅಜೇಯ 27 ರನ್ ಹಾಗೂ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ ಅಜೇಯ 35 ರನ್ ಚಚ್ಚಿದ್ದರು.
PublicNext
03/11/2021 11:17 pm