ಮುಂಬೈ: ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾ ಟಿ20 ತಂಡದ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಗುರುವಾರ ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಸುದೀರ್ಘ ಚರ್ಚೆಗಳನ್ನು ನಡೆಸಿದ್ದಾರೆ. ಅವರು ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬ್ಯಾಟಿಂಗ್‌ನತ್ತ ಗಮನ ಹರಿಸುವುದು ಹಾಗೂ ತಾವು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ಗಮನಹರಿಸುವ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಈ ಸಂಬಂಧ ಪತ್ರವೊಂದನ್ನು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, "ನನ್ನ ನಿಕಟವರ್ತಿಗಳಾದ ರವಿ ಶಾಸ್ತ್ರಿ ಮತ್ತು ರೋಹಿತ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ. ನಾಯಕತ್ವದ ಗುಂಪಿನ ಅತ್ಯಗತ್ಯ ಭಾಗವಾಗಿದ್ದ ನಾನು ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಂತರ ಟಿ20 ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ" ಎಂದು ತಿಳಿಸಿದ್ದಾರೆ.
"ನಾನು ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಎಲ್ಲಾ ಆಯ್ಕೆಗಾರರೊಂದಿಗೆ ಮಾತನಾಡಿದ್ದೇನೆ. ಟೀಂ ಇಂಡಿಯಾ ಹಾಗೂ ಭಾರತೀಯ ತಂಡಕ್ಕೆ ಅತ್ಯುತ್ತಮ ಸೇವೆಯನ್ನು ಮುಂದುವರಿಸುತ್ತೇನೆ" ಎಂದು ವಿರಾಟ್ ಹೇಳಿದ್ದಾರೆ.
"ಕೆಲಸದ ಹೊರೆ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯ. ಕಳೆದ 8-9 ವರ್ಷಗಳಲ್ಲಿ ನನ್ನ ಕೆಲಸದ ಹೊರೆಗಳನ್ನು ಪರಿಗಣಿಸಿ ಎಲ್ಲಾ 3 ಫಾರ್ಮ್ಯಾಟ್‌ಗಳನ್ನು ಆಡುವ ಮತ್ತು ಕಳೆದ 5-6 ವರ್ಷಗಳಿಂದ ನಾಯಕತ್ವ ವಹಿಸಿ ತಂಡವನ್ನು ಮುನ್ನಡೆಸಿದ್ದೇನೆ. ಆದರೆ ಈಗ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುವೆ. ನಾನು ಟಿ20 ಕ್ಯಾಪ್ಟನ್ ಆಗಿದ್ದಾಗ ತಂಡಕ್ಕೆ ಎಲ್ಲ ರೀತಿಯ ಬೆಂಬಲ ನೀಡಿದ್ದೇನೆ. ಮುಂದೆಯೂ ಬ್ಯಾಟ್ಸ್‌ಮನ್ ಆಗಿ ಟಿ 20 ತಂಡದಲ್ಲಿ ಮುಂದುವರೆಯುವೆ" ಎಂದು ವಿರಾಟ್ ತಿಳಿಸಿದ್ದಾರೆ.
PublicNext
16/09/2021 06:50 pm