ನವದೆಹಲಿ: ನಿಮ್ಮೊಂದಿಗೆ ಸ್ಪರ್ಧೆಗೆ ಇಳಿಯಲ್ಲ ಪಾಜಿ ಎಂದು ಆರ್‌ಸಿಬಿ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಅವರು ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸವಾಲಿಗೆ ಉತ್ತರಿಸಿದ್ದಾರೆ.
ಆರ್ಸಿಬಿಯ ಗೆಲುವಿನ ಓಟದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪಾತ್ರ ಬಹು ಮುಖ್ಯವಾಗಿದೆ. ಪಡಿಕ್ಕಲ್ ಆಡಿದ 4 ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಬ್ಯಾಟಿಂಗ್ ಪಡೆಗೆ ಬಲ ನೀಡಿದ್ದಾರೆ. ಶನಿವಾರ ನಡೆದ ವೀಕೆಂಡ್ ಧಮಾಕದ ಮೊದಲ ಮ್ಯಾಚ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಡಿಕ್ಕಲ್ 34 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿದ್ದು ವಿಶೇಷವಾಗಿತ್ತು. 45 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 140 ಸ್ಟ್ರೈಕ್ ರೇಟ್‍ನೊಂದಿಗೆ 63 ರನ್ ಗಳಿಸಿದ ಪಡಿಕ್ಕಲ್ ಸ್ಮರಣೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಯುವಿ, 'ಫಾರ್ಮ್ ತಾತ್ಕಾಲಿಕ ಕ್ಲಾಸ್ ಎಂಬುದು ಎಂದಿಗೂ ಇರುತ್ತದೆ. ಕಳೆದ ಎಂಟು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದನ್ನು ನಾನು ನೋಡೇ ಇಲ್ಲ. ಇದು ನಂಬಲು ಆಗದ ಮಾತು. ಪಡಿಕ್ಕಲ್ ತುಂಬಾ ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. ಅವರ ಜೊತೆ ಬ್ಯಾಟ್ ಮಾಡಬೇಕಿದೆ. ನಮ್ಮಿಬ್ಬರಲ್ಲಿ ಯಾರು ಜಾಸ್ತಿ ದೂರ ಸಿಕ್ಸ್ ಹೊಡೆಯುತ್ತಾರೆ ಅಂತ ನೋಡಬೇಕು' ಎಂದು ಹೇಳಿದ್ದರು.
ಇದಕ್ಕೆ ಉತ್ತರ ನೀಡಿರುವ ಪಡಿಕ್ಕಲ್, 'ನಿಮ್ಮೊಂದಿಗೆ ಸ್ಪರ್ಧೆ ಮಾಡುವುದಿಲ್ಲ ಪಾಜಿ. ನಾನು ಫ್ಲಿಕ್ ಶಾಟ್ ಹೊಡೆಯುವುದನ್ನು ನಿಮ್ಮಿಂದಲೇ ಕಲಿತ್ತಿದ್ದೇನೆ. ಸ್ಪರ್ಧೆ ಬೇಡ ಆದರೆ ನಿಮ್ಮ ಜೊತೆ ಬ್ಯಾಟಿಂಗ್ ಮಾಡುವ ಆಸೆ ಇದೆ, ಬನ್ನಿ' ಎಂದು ಪ್ರೀತಿಯ ಆಹ್ವಾನ ನೀಡಿದ್ದಾರೆ. ಇತ್ತ ಯುವಿ ಟ್ವೀಟ್‍ಗೆ ವಿರಾಟ್ ಕೊಹ್ಲಿ ಕೂಡ ಕಮೆಂಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ.
PublicNext
04/10/2020 02:42 pm